ಸಿದ್ದರಾಮಯ್ಯ ಜೊತೆ ಸಮಾನ ಮನಸ್ಕ ಶಾಸಕರು
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಸಂಪುಟ ಪುನಾರಚನೆಯ ಸುಳಿವು ನೀಡಿದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಾರಿಕೆ ರಾಜಕೀಯ ಆರಂಭವಾಗಿದ್ದು, ಒಂದೇ ಪಕ್ಷದಲ್ಲಿ ಹಲವು ಗುಂಪುಗಳು ನಿರ್ಮಾಣವಾಗಿವೆ.
ಕಾಂಗ್ರೆಸ್ ಪಕ್ಷದಲ್ಲೇ ಈಗ ಒಟ್ಟು ಮೂರು ಗುಂಪುಗಳಾಗಿರುವುದು ಮುಂದಿನ ಬೆಳವಣಿಗೆ ಬಗ್ಗೆ ತೀವ್ರ ಕುತೂಹಲ ಮೂಡಿಸಿದೆ. ಸಮಾನ ಮನಸ್ಕರ ಶಾಸಕರು ಇಂದು ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವರ ನಿವಾಸ ಕಾವೇರಿಯಲ್ಲಿ ಭೇಟಿ ಮಾಡಿದ್ದು, ಕೆಲಸ ಮಾಡದ ಸಚಿವರನ್ನು ಸಂಪುಟದಿಂದ ಕೈ ಬಿಡಬೇಕೆಂಬ ಬೇಡಿಕೆ ಸೇರಿದಂತೆ ಹಲವು ಬೇಡಿಕೆಗಳ ಪಟ್ಟಿಯನ್ನು ನೀಡಿದ್ದಾರೆ ಎನ್ನಲಾಗಿದೆ.
ಮತ್ತೊಂದೆಡೆ ಪಶು ಸಂಗೋಪನಾ ಸಚಿವ ಎ.ಮಂಜು ನೇತೃತ್ವದಲ್ಲಿ ಸಂಪುಟದಲ್ಲಿ ಒಕ್ಕಲಿಗ ಶಾಸಕರಿಗೆ ಪ್ರಾಶಸ್ತ್ಯ ನೀಡಬೇಕೆಂದು ಒತ್ತಾಯಿಸಲು ಮತ್ತೊಂದು ಗುಂಪು ಸಿದ್ಧತೆ ನಡೆಸಿದೆ.
ಈ ಮಧ್ಯೆ, ಸಮಾನ ಮನಸ್ಕ ಶಾಸಕರಿಗೆ ಸೆಡ್ಡು ಹೊಡೆಯಲು ಪರ್ಯಾಯವಾಗಿ ಉತ್ತರ ಕರ್ನಾಟಕದ ಹಿರಿಯ ಶಾಸಕರು ಮುಂದಾಗಿದ್ದು, ಈ ತಂಡದಲ್ಲಿ ಕೆ.ಬಿ.ಕೋಳಿವಾಡ, ಬಸವರಾಜ್ ಪಾಟೀಲ್ ಸೇಡಂ, ಎ.ಬಿ.ಮಾಲಕರೆಡ್ಡಿ ಸೇರಿದಂತೆ ಹಲವು ಹಿರಿಯ ಶಾಸಕರಿದ್ದಾರೆ. ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರ ನೇತೃತ್ವದಲ್ಲಿ ಸುಮಾರು 20ಕ್ಕೂ ಹೆಚ್ಚು ಹಿರಿಯ ಶಾಸಕರು ಸಮಾನ ಮನಸ್ಕ ಶಾಸಕರಿಗೆ ಸೆಡ್ಡು ಹೊಡೆಯಲು ಸಜ್ಜಾಗಿದ್ದು, ಆ ನಿಟ್ಟಿನಲ್ಲಿ ಕಾಂಗ್ರೆಸ್ ನಲ್ಲಿ ಗುಂಪು ರಾಜಕೀಯ ಆರಂಭವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics