ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತಿಂದ್ರ ಪಾಲುದಾರಿಕೆಯ ಮ್ಯಾಟ್ರಿಕ್ಸ್ ಇಮೇಂಜಿಂಗ್ ಸಲ್ಯೂಷನ್ಸ್ ಕಂಪನಿಗೆ ಲ್ಯಾಬ್ ಟೆಂಡರ್ ನೀಡಿರುವುದು ಸೃಜನಪಕ್ಷಪಾತ ಎಂದು ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಕೇಂದ್ರ ಸರ್ಕಾರವು ಸಚಿವರಿಗೆ ರೂಪಿಸಿರುವ ನೀತಿ ಸಂಹಿತೆ ಪ್ರಕಾರ ಸಚಿವರ ಕುಟುಂಬಸ್ಥರಿಗೆ ಯಾವುದೇ ಸರ್ಕಾರಿ ಗುತ್ತಿಗೆ ನೀಡುವಂತಿಲ್ಲ. ಆದರೆ, ಮುಖ್ಯಮಂತ್ರಿಗಳು ಅಧಿಕಾರ ದುರ್ಬಳಕೆ ಮಾಡಿಕೊಂಡು ಪುತ್ರನ ಕಂಪನಿಗೆ ಗುತ್ತಿಗೆ ನೀಡಿದ್ದಾರೆ ಎಂದು ಶೆಟ್ಟರ್ ಆರೋಪಿಸಿದ್ದಾರೆ.
ಮೊದಲಿಗೆ ಮಗ ನಿರ್ದೇಶಕನಾಗಿರುವ ಬಗ್ಗೆ ಗೊತ್ತೇ ಇಲ್ಲ ಎಂದು ಹೇಳಿದ ಮುಖ್ಯಮಂತ್ರಿ, ಸ್ವಲ್ಪ ಹೊತ್ತಿನಲ್ಲೇ ಎಲ್ಲವೂ ಕಾನೂನುಬದ್ಧವಾಗಿ ನಡೆದಿದೆ ಎಂದು ಹೇಳಿಕೆ ನೀಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಹಿನ್ನಲೆಯಲ್ಲಿ ಮ್ಯಾಟ್ರಿಕ್ಸ್ ಇಮೇಂಜಿಂಗ್ ಸಲ್ಯೂಷನ್ಸ್ ಗೆ ನೀಡಿರುವ ಟೆಂಡರ್ ನ್ನು ರದ್ದುಗೊಳಿಸಿ, ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಜಗದೀಶ್ ಶೆಟ್ಟರ್ ಆಗ್ರಹಿಸಿದ್ದಾರೆ.
ಈ ಪ್ರಕರಣ ಸಂಬಂಧಿಸಿದಂತೆ ಪ್ರತಿಕ್ರಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಮ್ಯಾಟ್ರಿಕ್ಸ್ ಇಮೇಂಜಿಂಗ್ ಸಲ್ಯೂಷನ್ಸ್ ಗೆ ಕಾನೂನುಬದ್ಧವಾಗಿ ಟೆಂಡರ್ ನೀಡಲಾಗಿದೆ. ಇದರಲ್ಲಿ ಅಕ್ರಮವೆಸಗಿಲ್ಲ ಎಂದು ಸ್ಪಷ್ಟನೇ ನೀಡಿದ್ದಾರೆ. ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್, ಸಿದ್ದರಾಮಯ್ಯ ಪುತ್ರ ಯತೀಂದ್ರ ಪಾಲುದಾರರಾಗಿದ್ದಾರೆ ಎಂಬ ಕಾರಣಕ್ಕೆ ಟೆಂಡರ್ ನೀಡಿಲ್ಲ ಎಂದು ಸಮರ್ಥನೆ ನೀಡಿದ್ದಾರೆ.