ರಾಜಕೀಯ

ಧೂಳು ಮುಕ್ತ ಸಂಚಾರಕ್ಕೆ ನೀರು ಪೋಲು: ಸಿದ್ಧರಾಮಯ್ಯ ವಿರುದ್ಧ ಬಿಎಸ್'ವೈ ಕಿಡಿ

Manjula VN

ಬೆಂಗಳೂರು: ಬರಪೀಡಿತ ರಾಜ್ಯ ಭೇಟಿ ವೇಳೆ ಧೂಳು ಮುಕ್ತ ರಸ್ತೆ ಸಂಚಾರಕ್ಕಾಗಿ ನೀರನ್ನು ಪೋಲು ಮಾಡಿರುವ ಘಟನೆ ಕುರಿತಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಂಗಳವಾರ ಕಿಡಿಕಾರಿದ್ದಾರೆ.

ಈ ಕುರಿತಂತೆ ಮಾತನಾಡಿರುವ ಅವರು, ರಾಜ್ಯದಲ್ಲಿ ಬರಗಾಲ ಸಂಭವಿಸಿದ್ದು, ನೀರಿಗಾಗಿ ಪರದಾಡುತ್ತಿರುವ ಸಂದರ್ಭದಲ್ಲಿ ಧೂಳು ಮುಕ್ತ ರಸ್ತೆ ಸಂಚಾರಕ್ಕಾಗಿ ಈ ರೀತಿಯಾಗಿ ನೀರು ಪೋಲು ಮಾಡಿರುವುದು ಖಂಡನೀಯ.  ಈ ರೀತಿಯ ಘಟನೆಯಿಂದ ಸಿದ್ದರಾಮಯ್ಯ ಅವರು ಗೇಲಿಗೊಳಗಾಗುತ್ತಾರೆಂದು ಹೇಳಿದ್ದಾರೆ.

ಸೋಮವಾರ ಬಾಗಲಕೋಟೆ ಬರ ಪೀಡಿತ ಪ್ರದೇಶಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸುತ್ತಾರೆ ಎಂಬ ವಿಚಾರ ತಿಳಿಯುತ್ತಿದ್ದಂತೆಯೇ ಅಲ್ಲಿನ ಧೂಳು ಸಹಿತ ರಸ್ತೆಗಳಿಗೆ ಅಧಿಕಾರಿಗಳು ನೀರು  ಹಾಕಿಸುವ ಮೂಲಕ ರಸ್ತೆಯಲ್ಲಿ ಧೂಳು ಏಳದಂತೆ ಮಾಡಿದ್ದರು.

ಬೀಳಗಿ ಪಟ್ಟಣದಲ್ಲಿ ಕನಕದಾಸ ಪುತ್ಥಳಿಗೆ ಸಿಎಂ ಸಿದ್ದರಾಮಯ್ಯ ಮಾಲಾರ್ಪಣೆ ಮಾಡಲು ಆಗಮಿಸುತ್ತಾರೆ ಎನ್ನುವ ವಿಚಾರ  ತಿಳಿದ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಅಲ್ಲಿನ ರಸ್ತೆಗೆ ಮತ್ತು ಅದರ ಸುತ್ತಮುತ್ತಲಿನ ರಸ್ತೆಗೆ 2 ಟ್ಯಾಂಕರ್ ಗಳ ಮೂಲಕ ನೀರು ಹಾಕಿದ್ದರು. ರಾಜ್ಯದಲ್ಲಿ ಬರಗಾಲ ತಲೆದೋರಿರುವ ಸಂದರ್ಭದಲ್ಲಿ ಕೇವಲ ರಸ್ತೆ ಸಂಚಾರಕ್ಕಾಗಿ ನೀರನ್ನು ಪೋಲು ಮಾಡಿರುವುದು ಇದೀಗ ಹೊಸ ವಿವಾದ ಸೃಷ್ಟಿಸಿದೆ.

SCROLL FOR NEXT