ಬೆಂಗಳೂರು: ಮಾತನ್ನೇ ಬಂಡವಾಳ ಮಾಡಿಕೊಂಡು ದೊಡ್ಡ ದೊಡ್ಡ ಮಾತುಗಳನ್ನಾಡುವ ಮೋದಿಯವರು ಮಾಡುವ ಸಾಧನೆ ಮಾತ್ರ ಸೊನ್ನೆಯಾಗಿದೆ ಎಂದು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆಯವರು ಸೋಮವಾರ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ 70ನೇ ಸ್ವಾತಂತ್ರೋತ್ಸವ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿರುವ ಅವರು, ಮೋದಿಯೊಬ್ಬ ದೊಡ್ಡ ಶೋಮ್ಯಾನ್ ಮತ್ತು ಅವರ ಸರ್ಕಾರ ಜಾಹೀರಾತು ಆಧಾರಿತ ಸರ್ಕಾರವಾಗಿದೆ. ದೊಡ್ಡ ದೊಡ್ಡ ಮಾತುಗಳನ್ನಾಡುವ ಮೋದಿಯವರು ಮಾಡುವ ಸಾಧನೆ ಮಾತ್ರ ಸೊನ್ನೆಯಾಗಿದೆ ಎಂದು ಹೇಳಿದ್ದಾರೆ.
ದೇಶದಲ್ಲಿ ಅಶಾಂತಿ ಹೆಚ್ಚಾಗಿದ್ದು, ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯಗಳು ನಡೆಯುತ್ತಿದೆ. 2 ವರ್ಷದಲ್ಲಿ ಯುವಕರಿಗೆ ಯಾವುದೇ ರೀತಿಯ ಉದ್ಯೋಗಾವಕಾಶಗಳನ್ನು ಸೃಷ್ಟಿಸಿಲ್ಲ. ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಉತ್ಪಾದಿಸಿದ್ದ ವಿದ್ಯುತ್ ನ್ನು ಹಳ್ಳಿಗಳಿಗೆ ತಲುಪಿಸಿದ್ದೇ ದೊಡ್ಡ ಸಾಧನೆಯೆಂದು ಮೋದಿ ಬಿಂಬಿಸಿಕೊಳ್ಳುತ್ತಿದ್ದಾರೆ.
ಅಧಿಕಾರಕ್ಕೆ ಬರುವಾಗ ಮೋದಿಯವರು ಸ್ವಿಸ್ ಬ್ಯಾಂಕ್ ನಲ್ಲಿರುವ ಕಪ್ಪು ಹಣವನ್ನು ಭಾರತಕ್ಕೆ ತರುವುದಾಗಿಯೂ, ಭಾರತದಲ್ಲಿರುವ ಪ್ರತೀಯೊಬ್ಬ ಭಾರತೀಯನ ಖಾತೆಗೆ ರು. 15 ಲಕ್ಷ ಹಾಕುವುದಾಗಿ ಹೇಳಿದ್ದರು. ಯಾರಾದರೂ ತಮ್ಮ ಅಕೌಂಟ್ ಗೆ ರು.15 ಲಕ್ಷ ಕಪ್ಪು ಹಣ ಬಂದಿದ್ದರೆ ಹೇಳಿ. ಇದರಿಂದಲೇ ಅವರ ಸಾಧನೆ ಏನು ಎಂಬುದು ಗೊತ್ತಾಗುತ್ತಿದೆ.
ಪ್ರತ್ಯೇಕವಾಗಿದ್ದ ರೈಲ್ವೆ ಬಜೆಟ್' ನ್ನು ರದ್ದು ಮಾಡಲಾಗಿದೆ. ಸಾರ್ವಜನಿಕ ವಲಯದ ರೈಲ್ವೆ ಬಜೆಟನ್ನು ರದ್ದು ಮಾಡುವುದು ಮತ್ತು ಅದನ್ನು ಸಾಮಾನ್ಯ ಬಜೆಟ್ ಜೊತೆಗೆ ಸೇರಿಸುವುದು ಸರಿಯಲ್ಲ. ರೈಲ್ವೆ ಅಭಿವೃದ್ಧಿಗೆ ಪ್ರತ್ಯೇಕ ಬಜೆಟ್ ಅಗತ್ಯವಿದೆ. ರೈಲ್ವೆ ಅಭಿವೃದ್ಧಿ ಹಾಗೂ ಅದರ ಪ್ರಗತಿಗೆ ಕೇಂದ್ರ ಸರ್ಕಾರ ಹೆಚ್ಚಿನ ರೀತಿಯಲ್ಲಿ ಹಣವನ್ನು ಒದಗಿಸಬೇಕೆಂದು ಆಗ್ರಹಿಸಿದ್ದಾರೆ.