ರಾಜಕೀಯ

"ಅಕ್ರಮ ಹಣದಲ್ಲಿ ಮೆಕ್ಕಾಗೆ ಜನ ಕಳಿಸಿದರೆ ದೇವರು ಕ್ಷಮಿಸ್ತಾನಾ"

Srinivasamurthy VN

ಬೆಂಗಳೂರು: ಉಪ ಚುನಾವಣೆ ಸಂಬಂಧ ಜೆಡಿಎಸ್ ನಲ್ಲಿ ಭುಗಿಲೆದ್ದಿರುವ ಅಸಮಾಧಾನ ತಾರಕ್ಕೇರಿದ್ದು, ಸ್ವತಃ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ಜಮೀರ್ ವಿರುದ್ಧ ನೇರ ವಾಗ್ದಾಳಿ ಮಾಡಿದ್ದಾರೆ.

ಹೆಬ್ಬಾಳ ಉಪಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ಆರ್‌ಟಿ ನಗರದಲ್ಲಿ ಏರ್ಪಡಿಸಲಾಗಿದ್ದ ಜೆಡಿಎಸ್ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಜೆಡಿಎಸ್ ರಾಷ್ಟ್ರಾಧ್ಯಕ್ಷ ಮತ್ತು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು, "ಶಾಸಕ ಜಮೀರ್ ಅಹಮದ್ ಖಾನ್ ಅಕ್ರಮವಾಗಿ ಸಂಪಾದಿಸಿದ ಹಣದಿಂದ ಪ್ರತಿವರ್ಷ 20 ಜನರನ್ನು ಮೆಕ್ಕಾಗೆ ಕಳುಹಿಸುತ್ತಿದ್ದಾರೆ. ಹೀಗೆ ಜನರನ್ನು ಮೆಕ್ಕಾಗೆ ಕಳುಹಿಸುವುದರಿಂದ ದೇವರು ಅವರ ತಪ್ಪನ್ನು ಕ್ಷಮಿಸುವುದಿಲ್ಲ ಎಂದು ಕಿಡಿಕಾರಿದರು.

"ಜಮೀರ್ ಅಹ್ಮದ್ ಖಾನ್ ಅವರು ಒಂದು ರೀತಿ ಮೀರ್ ಸಾದಿಕ್ ವರ್ಗಕ್ಕೆ ಸೇರಿದವರು. ಮಾಧ್ಯಮಗಳ ಎದುರು ನನ್ನನ್ನು ದೇವರು ಎಂದು ಹೇಳುತ್ತಾರೆ. ಬಳಿಕ ನನಗೇ ಒದೆಯುತ್ತಾರೆ. ಯಾವ ಸಾಧನೆಗಾಗಿ ಈ ಕಾರ್ಯ ಮಾಡುತ್ತಿದ್ದಾರೆ ಎಂಬುದನ್ನು ಅವರೇ ಹೇಳಬೇಕು. ಜೆಡಿಎಸ್‌ನಲ್ಲಿದ್ದುಕೊಂಡೇ ಇಲ್ಲಿನ ಅಭ್ಯರ್ಥಿ ಇಸ್ಮಾಯಿಲ್ ಷರೀಫ್ ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎನ್ನುತ್ತಿದ್ದಾರೆ. ಆದರೆ, ಅವರೇ ಅಭ್ಯರ್ಥಿಯನ್ನು ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಕೆಗೆ ಕರೆತಂದರು. ಜಮೀರ್ ಮತ್ತು ಇಕ್ಬಾಲ್ ಅನ್ಸಾರಿ ಇಬ್ಬರನ್ನೂ ನಾನೇ ಬೆಳೆಸಿದೆ. ಈಗ ತಮ್ಮ ಸ್ವಾರ್ಥಕ್ಕಾಗಿ ಬೆಳೆಸಿದ ಪಕ್ಷ ಮತ್ತು ಮುಖಂಡರ ವಿರುದ್ಧವೇ ಮಾತನಾಡುತ್ತಿದ್ದಾರೆ, ಅವರಿಗೆ ದೇವರು ಒಳ್ಳೆಯದು ಮಾಡುವುದಿಲ್ಲ. ಈ ಕೀಳುಮಟ್ಟದ ರಾಜಕಾರಣ ನೋಡಿದರೆ ಅಸಹ್ಯವಾಗುತ್ತದೆ ಎಂದು ದೇವೇಗೌಡರು ಹೇಳಿದರು.

ಸಿದ್ದರಾಮಯ್ಯರಿಂದ ಜೆಡಿಎಸ್ ನಾಶ ಸಾಧ್ಯವಿಲ್ಲ
ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವೂ ವಾಗ್ದಾಳಿ ನಡೆಸಿದ ದೇವೇಗೌಡ ಅವರು, ಚುನಾವಣೆಯೊಂದರಲ್ಲಿ ಸಿದ್ದರಾಮಯ್ಯ ಸೋತಾಗ ರಾಜಕೀಯದಿಂದ ದೂರ ಉಳಿಯುವ ಬಗ್ಗೆ ಮಾತನಾಡಿದ್ದರು. ಆ ಸಂದರ್ಭದಲ್ಲಿ ಅವರೊಂದಿಗೆ ನಾನಿದ್ದು ಸಕ್ರಿಯಗೊಳಿಸಿದೆ. ಸಿದ್ದರಾಮಯ್ಯಗೆ ಪಕ್ಷದ ರಾಜ್ಯಾಧ್ಯಕ್ಷ, ಡಿಸಿಎಂ ಸ್ಥಾನ ನೀಡಿದ್ದು ಜೆಡಿಎಸ್. ಈಗ ಆ ಪಕ್ಷವನ್ನೇ ಮುಗಿಸುವ ಮಾತನಾಡುತ್ತಿದ್ದಾರೆ. ಅದು ಅವರಿಂದ ಎಂದಿಗೂ ಸಾಧ್ಯವಿಲ್ಲ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ರಾಜ್ಯದಲ್ಲಿ ನೆಲೆ ಇಲ್ಲದಂತಾಗುತ್ತದೆ. ಅದಕ್ಕಾಗಿ ಎಲ್ಲ 224 ಕ್ಷೇತ್ರಗಳಿಗೂ ಪ್ರವಾಸ ಕೈಗೊಂಡು ಪಕ್ಷ ಬಲಪಡಿಸುತ್ತೇನೆ ಎಂದು ಹೇಳಿದರು.

SCROLL FOR NEXT