ಬೆಂಗಳೂರು: ಸಿಎಂ ವಾಚ್ ಬಗ್ಗೆ ಪದೇ ಪದೇ ಹೇಳಿಕೆ ನೀಡುತ್ತಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಸಿದ್ದರಾಮಯ್ಯ ಗುಟುರು ಹಾಕಿದ್ದಾರೆ.
ಎಚ್ ಡಿಕೆ ಮಗ ನಿಖಿಲ್ ಕೋಟ್ಯಂತರ ರೂಪಾಯಿ ಕಾರು ಖರೀದಿಸಿಲ್ವಾ? ಅದು ಕುಮಾರಸ್ವಾಮಿ ಮಗ ದುಡಿದಿರುವ ದುಡ್ಡಾ? ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಮಗ ಸಿನಿಮಾ ಮಾಡುತ್ತಿದ್ದಾನೆ. ಚಿತ್ರ ನಿರ್ಮಾಣಕ್ಕೆ ದುಡ್ಡು ಎಲ್ಲಿಂದ ಬಂತು? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಜಿ ಸಿಎಂ ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯನವರು 50ರಿಂದ 70 ಲಕ್ಷ ರೂಪಾಯಿ ಬೆಲೆ ಬಾಳುವ ವಾಚ್ ಕಟ್ಟುತ್ತಾರೆ. ಅವರಿಗೆ ಬಡವರ ಬಗ್ಗೆ ಕಾಳಜಿ ಇಲ್ಲ. ಅವರು ಸಮಾಜವಾದಿಯಲ್ಲ, ಮಜಾವಾದಿ ಎಂದು ಕುಮಾರಸ್ವಾಮಿ ಆರೋಪಿಸಿದ್ದರು.
ಈ ವಾಚ್ ಅನ್ನು ನನಗೆ ಯಾರೋ ಗಿಫ್ಟ್ ನೀಡಿದ್ದಾರೆ. ಬೇಕಾದ್ರೆ ಈಗಲೇ ಕೊಡ್ತೀನಿ. 5 ಲಕ್ಷ ರೂಪಾಯಿಗೆ ಕುಮಾರಸ್ವಾಮಿ ಈ ವಾಚ್ ತೆಗೆದುಕೊಳ್ತಾರಾ ಎಂದು ಮತ್ತೆ ಪ್ರಶ್ನಿಸಿದರು.
ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಅವರು ರಾತ್ರಿ ಜೀವನಕ್ಕೆ ತುಂಬಾ ಹಣ ವ್ಯಯಿಸುತ್ತಾರೆ. ಅವರಿಗೆ ಹಣ ಎಲ್ಲಿಂದ ಬರುತ್ತದೆ ಎಂದು ಹೇಳುವ ಮೂಲಕ ಕುಮಾರಸ್ವಾಮಿ ವಿವಾದಕ್ಕೆ ಗುರಿಯಾಗಿದ್ದರು.