ಬೆಂಗಳೂರು: ಹೆಬ್ಬಾಳ ಕ್ಷೇತ್ರದ ಉಪ ಚುನಾವಣೆಗೆ ಅಧಿಸೂಚನೆ ಪ್ರಕಟವಾಗುವ ಮೊದಲೇ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ರೆಹಮಾನ್ ಷರೀಫ್ ಹೆಸರು ಕೇಳಿಬಂದಿತ್ತು. ಆದರೇ ಎಲ್ಲಿಯೋ ಇದ್ದ ಭೈರತಿ ಸುರೇಶ್ ದಿಢೀರನೇ ಗ್ರ್ಯಾಂಡ್ ಎಂಟ್ರಿ ಪಡೆದುಕೊಂಡರೂ ಅದು ನೆಪ ಮಾತ್ರಕ್ಕೆ ಸೀಮಿತವಾಗಿ ನೇಪಥ್ಯಕ್ಕೆ ಸರಿದ ಬೆಳವಣಿಗೆ ಸಿಎಂ ಸಿದ್ದರಾಮಯ್ಯ ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಕಡೆ ಕ್ಷಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಹೊರಹೊಮ್ಮಿರುವ ಕೇಂದ್ರದ ಮಾಜಿ ಸಚಿವ ಸಿ.ಕೆ. ಜಾಫರ್ ಷರೀಫ್ ಮೊಮ್ಮಗ ರೆಹಮಾನ್ ಷರೀಫ್ ಹೆಬ್ಬಾಳ ಕ್ಷೇತ್ರದಿಂದ ಸ್ಪರ್ಧಿಸಲು ಬುಧವಾರ ನಾಮಪತ್ರ ಸಲ್ಲಿಸಿದರು. ಈ ವೇಳೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಹೊರತು ಪಡಿಸಿದರೆ ನಗರದ ಯಾವ ಸಚಿವರೂ ಇರಲಿಲ್ಲ.
ಇದು ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿದ ಬಳಿಕವೂ ಪಕ್ಷದೊಳಗೆ ಎಲ್ಲವೂ ಸರಿಯಿಲ್ಲ ಎನ್ನುವುದನ್ನು ಬಿಂಬಿಸುವಂತಿದೆ. ಉಪ ಚುನಾವಣೆ ಉಮೇದುವಾರರ ಆಯ್ಕೆಯಲ್ಲಿ ಸಿಎಂ ತೀರ್ಮಾನಕ್ಕೆ ಒಪ್ಪುವ ಮನಸ್ಥಿತಿಯಲ್ಲಿ ನಗರದ ಸಚಿವರೆಲ್ಲರೂ ಇದ್ದರು. ಆದರೆ, ಅಲ್ಪಸಂಖ್ಯಾತರಿಗೆ ಅವಕಾಶ ನೀಡಬೇಕೆನ್ನುವ ಒತ್ತಡ ಜೋರಾದಾಗ ಸಚಿವರಾದ ರೋಷನ್ ಬೇಗ್, ಕೆ.ಜೆ. ಜಾರ್ಜ್ ಅವರೂ ಒಳಗೊಳಗೇ ತಮ್ಮ ಸಮುದಾಯದ ಪರ ನಿಂತಿದ್ದರು ಎಂದು ಹೇಳಲಾಗಿತ್ತು. ಈ ನಡುವೆಯೂ ಅಲ್ಪಸಂಖ್ಯಾತರನ್ನು ಪ್ರತಿನಿಧಿಸುವ ಉಭಯ ಸಚಿವರು ಗೈರು ಹಾಜರಾದದ್ದು ಅಚ್ಚರಿ ಮೂಡಿಸುವಂತಿದೆ.
ಉಪ ಚುನಾವಣೆ ಅಭ್ಯರ್ಥಿಗಳ ಪಟ್ಟಿ ಅಖೈರುಗೊಳಿಸುವ ಸಂಬಂಧ ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಸಭೆ ನಡೆಸಿ ವಾಪಸಾದ ಬಳಿಕ ನಗರದ ಸಚಿವರನ್ನು ಕರೆಸಿಕೊಂಡು ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ, ಹೆಬ್ಬಾಳದ ಗೆಲುವಿಗಾಗಿ ರಣತಂತ್ರ ರೂಪಿಸಿದ್ದರು. ಕ್ಷೇತ್ರದ ವಾರ್ಡಿಗೊಬ್ಬರಂತೆ ಸಚಿವರನ್ನು ನಿಯೋಜಿಸುವ ತೀರ್ಮಾನವನ್ನು ಕೈಗೊಂಡಿದ್ದರು ಎಂದೂ ವರದಿಯಾಗಿತ್ತು. ಆದರೆ, ಸಿಎಂ ಆಪ್ತ ಬೈರತಿ ಸುರೇಶ್ ಅವರಿಗೆ ಟಿಕೆಟ್ ಖಾತರಿ ಎನ್ನುವ ವಾತಾವರಣವಿತ್ತು. ಹಾಗಾಗಿ ಅವರು ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದರು ಎನ್ನಲಾಗಿತ್ತು.