ರಾಜಕೀಯ

ಮಗನ ಅಕ್ರಮ ಚಟುವಟಿಕೆಗಳಿಗೆ ಮಹದೇವಪ್ಪ ಬೆಂಬಲ: ಈಶ್ವರಪ್ಪ ಆರೋಪ

Manjula VN

ಬೆಂಗಳೂರು: ಮಗನ ಅಕ್ರಮ ಚಟುವಟಿಕೆಗಳಿಗೆ ಸ್ವತಃ ಅವರ ತಂದೆ ಲೋಕೋಪಯೋಗಿ ಸಚಿವ ಹೆಚ್.ಸಿ. ಮಹದೇವಪ್ಪ ಅವರೇ ಬೆಂಬಲ ನೀಡುತ್ತಿದ್ದಾರೆಂದು ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರು ಮಂಗಳವಾರ ಆರೋಪಿಸಿದ್ದಾರೆ.

ವಿಧಾನಮಂಡಲ ಅಧಿವೇಶನದಲ್ಲಿ ಮಾತನಾಡಿರುವ ಅವರು, ಮೈಸೂರು ಜಿಲ್ಲೆಯ ಟಿ ನರಸೀಪುರದಲ್ಲಿ ಸಾವಿರಾರು ಲಾರಿಗಳಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡಲಾಗುತ್ತಿದೆ. ಇದಲ್ಲದೆ, ಕೃಷ್ಣ, ಭೀಮಾ, ತುಂಗಾಭದ್ರ ಮತ್ತು ಇನ್ನಿತರೆ ನದಿಗಳ ದಂಡೆಗಳಲ್ಲೂ ಅಕ್ರಮ ಮರಳು ಪ್ರಕರಣಗಳು ಕಂಡುಬರುತ್ತಿದೆ. ವಿಚಾರ ಬೆಳಕಿಗೆ ಬಂದಾಗಲೆಲ್ಲಾ ಪ್ರತೀ ಬಾರಿಯೂ ಪ್ರಾಮಾಣಿಕ ಅಧಿಕಾರಿಗಳು ಪ್ರಕರಣವನ್ನು ವಿಚಾರಣೆ ನಡೆಸುತ್ತಾರೆ. ಆದರೆ, ಅಧಿಕಾರಿಗಳಿಗೆ ಬೆದರಿಕೆ ಹಾಕಿ ಹಿಂದೆ ಸರಿಯುವಂತೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಕೆಲ ವರ್ಷಗಳ ಹಿಂದೆ ಭೂವಿಜ್ಞಾನಿಯೊಬ್ಬ ವ್ಯಕ್ತಿಯಿಂದ ಹಣ ಪಡೆಯುತ್ತಿರುವ ಭ್ರಷ್ಟಾಚಾರ ಪ್ರಕರಣವೊಂದು ಬೆಳಕಿಗೆ ಬಂದಿತ್ತು. ಈ ವೇಳೆ ಪತ್ರದ ಮುಖಾಂತರ ಹೇಳಿಕೆ ನೀಡಿದ್ದ ಭೂವಿಜ್ಞಾನಿ, ಮಹದೇವಪ್ಪ ಅವರ ಮಗ ಸುನಿಲ್ ಬೋಸ್ ಅವರು ಅಕ್ರಮ ಮರಳು ಸಾಗಾಟ ಸಂಬಂಧ ವ್ಯಕ್ತಿಯೊಬ್ಬನ ಬಳಿ ಹಣ ಪಡೆದುಕೊಳ್ಳುವಂತೆ ಹೇಳಿದ್ದರು. ಹೀಗಾಗಿ ಹಣವನ್ನು ತೆಗೆದುಕೊಳ್ಳುತ್ತಿದ್ದೆ ಎಂದು ಹೇಳಿಕೊಂಡಿದ್ದರು.

ರು.1 ಲಕ್ಷ ಭ್ರಷ್ಟ ಹಣವನ್ನು ಪಡೆದುಕೊಂಡಿದ್ದು, ಇದರಲ್ಲಿ ರು. 75 ಸಾವಿರ ಹಣವನ್ನು ಸುನಿಲ್ ಗೆ ನೀಡಿಲಾಗಿದೆ ಎಂದಿದ್ದರು. ಈ ಸಂಬಂಧ ಲೋಕಾಯುಕ್ತ ಪೊಲೀಸರು ಸುನಿಲ್ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದರು. ಕೊನೆಗೂ ಸುನಿಲ್ ಗೆ ಜಾಮೀನು ದೊರೆತಿತು. ಮಹದೇವಪ್ಪ ಅವರು ತಮ್ಮ ರಾಜಕೀಯ ಪ್ರಭಾವದಿಂದ ಹಾಗೂ ಪೊಲೀಸರ ಮೇಲೆ ಒತ್ತಡ ಹೇರಿದ ಕಾರಣ ಕೆಲ ವರ್ಷಗಳ ನಂತರ ಪ್ರಕರಣದಲ್ಲಿ ಸುನಿಲ್ ಹೆಸರನ್ನು  ಲೋಕಾಯುಕ್ತ ಪೊಲೀಸರು ತೆಗೆದುಹಾಕಲಾಯಿತು. ಒಬ್ಬ ರಾಜಕೀಯ ವ್ಯಕ್ತಿ ಪೊಲೀಸರ ಮೇಲೆ ನಿಯಂತ್ರಣ ತೆಗೆದುಕೊಂಡರೆ ಇಂತಹ ಬೆಳವಣಿಗೆಗಳು ಕಂಡುಬರುತ್ತದೆ ಎಂದು ಹೇಳಿದ್ದಾರೆ.

ಇನ್ನು ಕೆಲ ದಿನಗಳ ಹಿಂದಷ್ಟೇ ಖಾಸಗಿ ವಾಹಿನಿಯೊಂದು ಪೊಲೀಸ್ ಅಧಿಕಾರಿಗಳು ಸುನಿಲ್ ಬೋಸ್ ರನ್ನು ಹೆಗಲ ಮೇಲೆ ಹೊತ್ತುಕೊಂಡು ಕುಣಿದಾಡುತ್ತಿರುವುದನ್ನು ತೋರಿಸಿದ್ದರು. ಇದು ನಿಜಕ್ಕೂ ಖಂಡನೀಯವಾದದ್ದು. ಮಹದೇವಪ್ಪ ಅವರು ಹುದ್ದೆಯಲ್ಲಿ ಮುಂದುವರೆಯುವ ನೈತಿಕ ಹಕ್ಕನ್ನು ಹೊಂದಿಲ್ಲ. ಸಚಿವ ಸ್ಥಾನದಿಂದ ಮಹದೇವಪ್ಪ ಅವರನ್ನು ತೆಗೆದುಹಾಕಬೇಕು. ಈ ಕುರಿತಂತೆ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸುತ್ತೇನೆಂದು ಹೇಳಿದ್ದಾರೆ.

SCROLL FOR NEXT