ಬೆಂಗಳೂರು: ಭಿನ್ನಮತೀಯ ಜೆಡಿಎಸ್ ಶಾಸಕರ ಜೊತೆ ಸಂಧಾನ ಕಥೆ ಮುಗಿದ ಅಧ್ಯಾಯ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಜೆಡಿಎಸ್ ಪಕ್ಷದ ಭಿನ್ನಮತೀಯ ಶಾಸಕರ ಜೊತೆ ಮತ್ತೆ ಮಾತುಕತೆ ಇಲ್ಲ ಎಂದು ಸ್ಪಷ್ಟಪಡಿಸುವ ಮೂಲಕ ಜೆಡಿಎಸ್ ನೊಳಗಿನ ಬಂಡಾಯಕ್ಕೆ ಮತ್ತಷ್ಟು ಬಿಸಿ ಮುಟ್ಟಿಸಿದ್ದಾರೆ. ನಿನ್ನೆ ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ನನಗೂ ಶಾಸಕ ಎಚ್.ಸಿ.ಬಾಲಕೃಷ್ಣ ನಡುವೆ ಯಾವುದೇ ಮಾತಿನ ಚಕಮಕಿ ನಡೆದಿಲ್ಲ ಎಂದು ಸಮಜಾಯಿಷಿ ನೀಡಿದರು. ನಿನ್ನೆ ಜೆಡಿಎಲ್ ಪಿ ಸಭೆಯಲ್ಲಿ ಬಾಲಕೃಷ್ಣ ಕಥೆ ಹೇಳಿಕೊಂಡಿದ್ದಾರೆ ಎಂದು ವ್ಯಂಗ್ಯದ ತಿರುಗೇಟು ನೀಡಿದ್ದಾರೆ.
ಎಲ್ಲಾ ಶಾಸಕರ ಅಭಿಪ್ರಾಯ ಪಡೆದುಕೊಂಡೇ ರಾಜ್ಯಸಭೆಗೆ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗಿದೆ. ಯಾರೋ ಮೂರ್ನಾಲ್ಕು ಜನ ಕೈಗೆ ಸಿಗದೆ ಓಡಾಡಿಕೊಂಡಿದ್ದರು. ಅವರ ಜತೆ ಚರ್ಚೆ ಮಾಡೋಕೆ ಆಗಿಲ್ಲ ಅಷ್ಟೇ ಎಂದು ಭಿನ್ನಮತೀಯ ಶಾಸಕರಿಗೆ ಟಾಂಗ್ ನೀಡಿದ್ದಾರೆ.