ಬೆಂಗಳೂರು: ಪಕ್ಷದ ನಾಯಕತ್ವದ ವಿರುದ್ಧವೇ ತಿರುಗಿಬಿದ್ದು ಅಮಾನತುಗೊಂಡಿರುವ ತನ್ನ 8 ಶಾಸಕರ ಸದಸ್ಯತ್ವವನ್ನು ಅನರ್ಹಗೊಳಿಸುವಂತೆ ಜೆಡಿಎಸ್ ಸೋಮವಾರ ವಿಧಾನಸಭೆ ಉಪಾಧ್ಯಕ್ಷರಿಗೆ ಮನವಿ ಮಾಡಿದೆ.
ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಅಮಾನತುಗೊಂಡಿರುವ ಚೆಲುವರಾಯಸ್ವಾಮಿ, ಜಮೀರ್ ಅಹ್ಮದ್ ಖಾನ್, ಕೆ.ಗೋಪಾಲಯ್ಯ, ಅಖಂಡ ಶ್ರೀನಿವಾಸಮೂರ್ತಿ, ಇಕ್ಬಾಲ್‌ಅನ್ಸಾರಿ, ರಮೇಶ್ ಬಂಡಿಸಿದ್ದೇಗೌಡ, ಎಚ್.ಸಿ.ಬಾಲಕೃಷ್ಣ ಹಾಗೂ ಭೀಮಾನಾಯಕ್ ಅವರ ಸದಸ್ಯತ್ವವನ್ನು ಅನರ್ಹಗೊಳಿಸುವಂತೆ ಜೆಡಿಎಸ್ ಶಾಸಕರಾದ ಬಿ.ಬಿ.ನಿಂಗಯ್ಯ ಹಾಗೂ ಸಿ.ಎನ್.ಬಾಲಕೃಷ್ಣ ಅವರು ಉಪ ಸಭಾಪತಿ ಎನ್.ಎಚ್.ಶಿವಶಂಕರರೆಡ್ಡಿ ಅವರಿಗೆ ದೂರು ನೀಡಿದ್ದಾರೆ.
ವಿಧಾನಪರಿಷತ್ತು ಹಾಗೂ ರಾಜ್ಯಸಭೆ ಚುನಾವಣೆ ಸಂದರ್ಭದಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದು, ಪಕ್ಷಾಂತರ ನಿಷೇಧ ಕಾಯ್ದೆಯಡಿ 8 ಮಂದಿ ಶಾಸಕರನ್ನು ವಿಧಾನಸಭಾ ಸದಸ್ಯತ್ವದಿಂದ ಅನರ್ಹಗೊಳಿಸುವಂತೆ ಜೆಡಿಎಸ್ ಮನವಿ ಮಾಡಿದೆ.