ರಾಜಕೀಯ

ಪದಾಧಿಕಾರಿಗಳ ಆಯ್ಕೆಯಲ್ಲಿ ಹಸ್ತಕ್ಷೇಪ ಆರೋಪ ತಳ್ಳಿಹಾಕಿದ ಶೋಭಾ ಕರಂದ್ಲಾಜೆ

Lingaraj Badiger
ಬೆಂಗಳೂರು: ಪದಾಧಿಕಾರಿಗಳ ಆಯ್ಕೆಯಲ್ಲಿ ತಾವು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಬಿಜೆಪಿ ಅತೃಪ್ತರ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಸಂಸದೆ ಶೋಭಾ ಕರಂದ್ಲಾಜೆ ಅವರು, ಪದಾಧಿಕಾರಿಗಳ ನೇಮಕದಲ್ಲಿ ನನ್ನ ಕೈವಾಡ ಇಲ್ಲ. ನನ್ನ ಮೇಲಿನ ಆರೋಪ ಸತ್ಯಕ್ಕೆ ದೂರವಾದ ಎಂದಿದ್ದಾರೆ.
ನಿನ್ನೆ ಬಿಜೆಪಿ ಕಚೇರಿಯಲ್ಲಿ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ನಡೆದ ಅತೃಪ್ತರ ಸಭೆಯಲ್ಲಿ ರಾಜ್ಯ ಪದಾಧಿಕಾರಿಗಳ ಆಯ್ಕೆಯಲ್ಲಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅರು ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಮತ್ತು ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಅವರು ಅನಗತ್ಯ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. 
ಈ ಬಗ್ಗೆ ಇಂದು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಶೋಭಾ ಕರಂದ್ಲಾಜೆ, ಕಳೆದ 10 ವರ್ಷಗಳಿಂದ ನನ್ನ ವಿರುದ್ಧ ಇದೇ ಆರೋಪ ಕೇಳಿ ಬರುತ್ತಿದೆ. ನಾನು ಯಾವುದರಲ್ಲೂ ಹಸ್ತಕ್ಷೇಪ ಮಾಡಿಲ್ಲ. ಪಕ್ಷದ ಪರವಾಗಿ ಕೆಲಸ ಮಾಡ್ತೇನೆ ಅಷ್ಟೇ...ಪಕ್ಷದ ಅಧ್ಯಕ್ಷರು ಕೊಟ್ಟ ಕೆಲಸ ಮಾಡುತ್ತಿದ್ದೇನೆ ಎಂದರು.
ಈಶ್ವರಪ್ಪನವರು ದೊಡ್ಡವರು. ಅವರ ಬಗ್ಗೆ ನಾನು ಏನೂ ಹೇಳಲ್ಲ. ಎಲ್ಲ ಬೆಳವಣಿಗೆಗಳನ್ನು ಕೇಂದ್ರದ ವರಿಷ್ಠರ ಗಮನಕ್ಕೆ ತಂದಿದ್ದೇವೆ ಎಂದರು. ಅಲ್ಲದೆ ಪದಾಧಿರಾಗಿಳು ಯಾರಿದ್ದಾರೆ ಅಂತಾನೇ ನನಗೆ ಗೊತ್ತಿಲ್ಲ. ಎಲ್ಲರ ಸುತ್ತ ಸುತ್ತಲು ನಾನೇನು ಸೂರ್ಯನೇ ಎಂದು ಈಶ್ವರಪ್ಪಗೆ ಟಾಂಗ್ ನೀಡಿದರು.
SCROLL FOR NEXT