ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ದುಬಾರಿ ವಾಚ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಸರ್ಕಾರದಿಂದ ಸ್ಪಷ್ಟ ಉತ್ತರ ಕೊಡಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ವಿಧಾನಸಭೆ ಮತ್ತು ವಿಧಾನ ಪರಿಷತ್ ಗಳಲ್ಲಿ ಧರಣಿ ಕೈಬಿಡಲು ಜೆಡಿಎಸ್ ಹಾಗೂ ಬಿಜೆಪಿ ನಿರ್ಧರಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರ್ಚಿಗೆ ಕಂಟಕವಾಗಿ, ಹಲವು ದಿನಗಳಿಂದ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದ ದುಬಾರಿ ವಾಚ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಮಂಡಲದ ಉಭಯ ಸದನಗಳಲ್ಲೂ ಪ್ರತಿಭಟನೆ ಕೈ ಬಿಡಲು ಪ್ರತಿಪಕ್ಷಗಳು ತೀರ್ಮಾನಿಸಿವೆ.
ದುಬಾರಿ ವಾಚ್ ಪ್ರಕರಣ ಪ್ರಸ್ತಾಪಿಸಿ ಸಭಾತ್ಯಾಗ ಮಾಡುವ ಬಗ್ಗೆ ಬಿಜೆಪಿ ಈ ಮೊದಲು ನಿರ್ಧರಿಸಿತ್ತು. ಆದರೆ ಈ ಚರ್ಚೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಗದ್ದಲ ಸಾರ್ವಜನಿಕವಾಗಿ ಅಪಾರ್ಥಕ್ಕೆ ಎಡೆ ಮಾಡಿಕೊಡಲಿದೆ ಎಂಬ ಆತಂಕದಿಂದಾಗಿ ಬಿಜೆಪಿ ಮತ್ತು ಜೆಡಿಎಸ್ ಸ್ಪೀಕರ್ ಕಾಗೋಡು ನೀಡಿದ ಭರವಸೆ ಹಿನ್ನೆಲೆಯಲ್ಲಿ ಧರಣಿ ಕೈಬಿಟ್ಟು ಸುಗಮ ಕಲಾಪಕ್ಕೆ ಅವಕಾಶ ಮಾಡಿಕೊಟ್ಟಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಚನ್ನು ಬುಧವಾರ ಸರ್ಕಾರಕ್ಕೆ ಹಸ್ತಾಂತರಿಸಿ ವಿವಾದಕ್ಕೆ ತೆರೆ ಎಳೆದಿದ್ದರು. ಆದರೆ ಇದು ಪ್ರತಿಪಕ್ಷಗಳಿಗೆ ಸಮಾಧಾನ ತಂದಿಲ್ಲವಾಗಿತ್ತು. ಹಾಗಾಗಿ ಗುರುವಾರವೂ ವಾಚ್ ವಿಚಾರದಲ್ಲಿ ಸ್ಪಷ್ಟ ಉತ್ತರಕ್ಕೆ ಪಟ್ಟು ಹಿಡಿಯುವ ಬಗ್ಗೆ ನಿರ್ಧರಿಸಿದ್ದವು.