ಬೆಂಗಳೂರು: ಆರ್‌ಎಸ್‌ಎಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣದಲ್ಲಿ ನಗರಾಭಿವೃದ್ಧಿ ಮತ್ತು ಹಜ್ ಸಚಿವ ಆರ್. ರೋಷನ್ ಬೇಗ್ ಕೈವಾಡವಿದೆ ಎಂಬ ಮಾಜಿ ಸಚಿವೆ, ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಆರೋಪವನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಸ್ಪಷ್ಟವಾಗಿ ತಳ್ಳಿಹಾಕಿದ್ದು, ಇದೊಂದು ಆಧಾರ ರಹಿತ ಆರೋಪ ಎಂದಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, ನಮ್ಮ ಇಲಾಖೆಯಿಂದ ಬಂದಿರುವ ಸದ್ಯದ ಮಾಹಿತಿ ಪ್ರಕಾರ ರುದ್ರೇಶ್ ಕೊಲೆ ಪ್ರಕರಣದಲ್ಲಿ ರೋಷನ್ ಬೇಗ್ ಅವರ ಪಾತ್ರ ಇಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರು ರೋಷನ್ ಬೇಗ್ ಅವರ ಪಾತ್ರ ಇದೆ ಎಂದು ಆರೋಪಿಸಿದ್ದಾರಲ್ಲಾ ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ, ಜವಾಬ್ದಾರಿಯುತ ಸ್ಥಾನದಲ್ಲಿರುವ ಶೋಭಾ ಅವರು ಇಂತಹ ಗಂಭೀರ ಆರೋಪ ಮಾಡುವ ಮೊದಲು ಬಹುಶಃ ಎಲ್ಲವನ್ನೂ ಪರಿಶೀಲಿಸಿ ಮಾತನಾಡಿದ್ದಾರೆ ಎಂದುಕೊಂಡಿದ್ದೇನೆ. ಆದರೆ, ರುದ್ರೇಶ್ ಕೊಲೆಯಲ್ಲಿ ರೋಷನ್ ಬೇಗ್ ಅವರ ಪಾತ್ರವಿಲ್ಲ ಎಂಬುದು ನಮ್ಮ ಇಲಾಖೆಯಿಂದ ಇರುವ ಸದ್ಯದ ಮಾಹಿತಿ. ಹಾಗಾಗಿ ಶೋಭಾ ಕರಂದ್ಲಾಜೆ ಅವರು ತಾವು ಮಾಡಿರುವ ಆರೋಪವನ್ನು ತಾವೇ ಸಾಬೀತುಪಡಿಸಬೇಕು. ತಮ್ಮ ಬಳಿ ಏನೆಲ್ಲಾ ಮಾಹಿತಿಗಳಿವೆಯೋ ಅವೆಲ್ಲವನ್ನೂ ಪೊಲೀಸ್ ಇಲಾಖೆಗೆ ನೀಡಬೇಕು. ಇಲ್ಲದಿದ್ದರೆ ಅವರೇ ತಪ್ಪಿತಸ್ಥರಾಗುತ್ತಾರೆ ಎಂದರು.