ರಾಜಕೀಯ

ರೆಡ್ಡಿ ಮಗಳ ಮದುವೆಗೆ ನಾನು ಹೋಗುತ್ತೇನೆ: ಜಗದೀಶ್ ಶೆಟ್ಟರ್

Lingaraj Badiger
ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಮಗಳ ಅದ್ಧೂರಿ ಮದುವೆಯಲ್ಲಿ ತಾವು ಭಾಗವಹಿಸುತ್ತಿರುವುದಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು ಮಂಗಳವಾರ ಹೇಳಿದ್ದಾರೆ.
ಕೇಂದ್ರ ಸರ್ಕಾರ ಕಪ್ಪು ಹಣದ ವಿರುದ್ಧ ಹೋರಾಡುತ್ತಿರುವ ಸಂದರ್ಭದಲ್ಲಿ ಬಿಜೆಪಿ ನಾಯಕರು ರೆಡ್ಡಿ ಮದುವೆಯಲ್ಲಿ ಭಾಗವಹಿಸುವುದು ಬೇಡ ಎಂದು ಬಿಜೆಪಿ ಹೈಕಮಾಂಡ್ ರಾಜ್ಯ ನಾಯಕರಿಗೆ ಸೂಚಿಸಿದೆ ಎಂಬ ಮಾಧ್ಯಮ ವರದಿಯ ಬಗ್ಗೆ ಪ್ರತಿಕ್ರಿಯಿಸಿದ ಶೆಟ್ಟರ್, ಮದುವೆಗೆ ಹೋಗದಂತೆ ಹೈಕಮಾಂಡ್ ಯಾರಿಗೂ ಸೂಚಿಸಿಲ್ಲ. ರೆಡ್ಡಿ ಮಗಳ ಮದುವೆಗೆ ಹೋಗುವುದು ವೈಯಕ್ತಿಕ ವಿಚಾರ ಎಂದರು.
ಜನಾರ್ದನ ರೆಡ್ಡಿ ಅವರು ಕುಟುಂಬ ಸಮೆತ ನನ್ನ ಮಗನ ಮದುವೆಗೆ ಬಂದಿದ್ದರು. ಹೀಗಾಗಿ ನಾನು ಸಹ ಅವರ ಮಗಳ ಮದುವೆಗೆ ಹೋಗುತ್ತಿದ್ದೇನೆ ಎಂದು ಜಗದೀಶ್ ಶೆಟ್ಟರ್ ಅವರು ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ ಕೇಳಿ ಬರುತ್ತಿರುವ ಕಪ್ಪು ಹಣದ ಸದ್ದಿನ ನಡುವೆ ಕೋಟಿಗಟ್ಟಲೆ ವೆಚ್ಚ ಮಾಡಲಾಗಿರುವ ಅದ್ಧೂರಿ ವಿವಾಹದಲ್ಲಿ ಪಾಲ್ಗೊಂಡರೆ ಕೆಟ್ಟ ಸಂದೇಶ ರವಾನೆಯಾಗಬಹುದು ಎಂಬ ಉದ್ದೇಶದಿಂದ ಬಿಜೆಪಿ ಸೇರಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಅನೇಕ ಹಿರಿಯ ನಾಯಕರು ಬುಧವಾರದ ವಿವಾಹ ಸಮಾರಂಭದಿಂದ ದೂರ ಉಳಿಯಲು ತೀರ್ಮಾನಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ನಾಯಕರೂ ಗೈರು ಹಾಜರಾಗಲಿದ್ದಾರೆ ಎನ್ನಲಾಗಿದೆ.
SCROLL FOR NEXT