ಬೆಂಗಳೂರು: ಅಕ್ರಮ ಗಣಿಗಾರಿಕೆ ಮಾಡಿ ಸಂಪಾದಿಸಿದ ಕಪ್ಪು ಹಣದಿಂದ ಜನಾರ್ದನ ರೆಡ್ಡಿ ತನ್ನ ಮಗಳ ಮದುವೆಯನ್ನು ಮಾಡಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಕಪ್ಪು ಹಣ ವಿರುದ್ಧ ಕ್ರಮಕ್ಕೆ ಅವರು ತಗೆದುಕೊಂಡಿರುವ ನಿರ್ಧಾರವನ್ನು ಶ್ಲಾಘಿಸಿದ್ದೇನೆ ಮತ್ತು ಕಪ್ಪು ಹಣ ಪತ್ತೆಗೆ ನನ್ನ ಬೆಂಬಲ ಯಾವತ್ತೂ ಇದೆ ಎಂದು ಪತ್ರ ಬರೆದಿರುವ ದೇವೇಗೌಡರು ದೇಶದಲ್ಲಿ ಕೆಲ ಜನ ಬಡತನದಲ್ಲಿ ನರಳುತ್ತಿದ್ದಾರೆ. ಜನಾರ್ದನ ರೆಡ್ಡಿಯವರು 200 ಕೋಟಿ ರೂ. ಖರ್ಚು ಮಾಡಿ ಅದ್ಧೂರಿಯಾಗಿ ಮಗಳ ಮದುವೆ ಮಾಡಿದ್ದಾರೆ. ರೆಡ್ಡಿ ಮಗಳ ಮದುವೆಗೆ ಕರ್ನಾಟಕ ಬಿಜೆಪಿಯ ನಿಮ್ಮ ಸಹೊದ್ಯೋಗಿಗಳು ಕೂಡ ಭಾಗವಹಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ಈ ಮೂಲಕ ನಿಮ್ಮ ಆಶಯವನ್ನು ರಾಜ್ಯ ಬಿಜೆಪಿ ನಾಶ ಮಾಡಿದೆ ಎಂದು ಪತ್ರದಲ್ಲಿ ದೂರಿರುವ ವಿಚಾರವನ್ನು ಅವರು ತಿಳಿಸಿದರು.
ಕೇಂದ್ರ ಸರ್ಕಾರದ ನೋಟ್ ಬ್ಯಾನ್ ಕ್ರಮದಿಂದ ಬಡವರಿಗೆ ಅನಾನುಕೂಲವಾಗುತ್ತಿದೆ. ದಿನ ನಿತ್ಯದ ಮೂಲಭೂತ ಅವಶ್ಯಕತೆಗಳ ಬಳಕೆಗೆ ಜನಸಾಮನ್ಯರಿಗೆ ತುಂಬಾ ತೊಂದರೆಯಾಗುತ್ತಿದ್ದು, ಈ ತೊಂದರೆಯನ್ನು ಸ್ವಲ್ಪ ಮಟ್ಟಿಗಾದರೂ ಕಡಿಮೆ ಮಾಡಲು ಜನರಿಗೆ ಡಿಸಿಸಿ ಬ್ಯಾಂಕುಗಳಲ್ಲಿ ಹಣದ ವ್ಯವಹಾರಕ್ಕೆ ಅವಕಾಶ ಮಾಡಿಕೊಡಬೇಕೆಂದು ಪತ್ರದಲ್ಲಿ ಮನವಿ ಮಾಡಿರುವುದಾಗಿ ದೇವೇಗೌಡ ತಿಳಿಸಿದ್ದಾರೆ.
ಕರ್ನಾಟಕದಲ್ಲಿ 21 ಡಿಸಿಸಿ ಬ್ಯಾಂಕ್ ಗಳಿದ್ದು ಅವುಗಳದ್ದು ಒಟ್ಟು 706 ಶಾಖೆಗಳಿವೆ ಎಂದು ಹೇಳಿದ್ದಾರೆ. ಡಿಸಿಸಿ ಬ್ಯಾಂಕ್ ಗಳಿಂದ ಬೆಳೆ ಸಾಲ ಪಡೆದ ರೈತರು ಬಡ್ಡಿ ಸಬ್ಸಿಡಿ ಪಡೆಯಲು ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ.