ಬೆಂಗಳೂರು: ತಮ್ಮ ಪ್ರತಿಷ್ಠೆಗೆ ರಾಜ್ಯವನ್ನು ಬಲಿಪಶು ಮಾಡಿದ ಫಾಲಿ ನಾರಿಮನ್ ವಿರುದ್ಧ ಬಿಜೆಪಿ ಕಿಡಿಕಾರುತ್ತಿದ್ದು, ಕಾವೇರಿ ವಿವಾದ ಕುರಿತಂತೆ ರಾಜ್ಯದ ಪರವಾಗಿ ಸುಪ್ರೀಂನಲ್ಲಿ ವಾದ ಮಂಡಿಸಲು ಬೇರೆ ವಕೀಲರನ್ನು ನಿಯೋಜಿಸುವಂತೆ ಆಗ್ರಹಿಸುತ್ತಿದೆ.
ವಿಧಾನ ಪರಿಷತ್ತಿನಲ್ಲಿ ನಡೆದ ಚರ್ಚೆ ಸಂದರ್ಭದಲ್ಲಿ ಫಾಲಿ ನಾರಿಮನ್ ವಿರುದ್ಧ ತೀವ್ರವಾಗಿ ಕಿಡಿಕಾರಿರುವ ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಅವರು, ಹಲವು ಬಾರಿ ರಾಜ್ಯದ ವಿರುದ್ಧವೇ ಸುಪ್ರೀಂ ಆದೇಶ ಹೊರಡಿಸಿದೆ. ಆದರೂ ಅ.18 ರಂದು ನಡೆಯಲಿರುವ ವಿಚಾರಣೆಯಲ್ಲಿ ರಾಜ್ಯದ ಪರವಾಗಿ ಆದೇಶ ಬರುವ ಒಂದಿಷ್ಟು ನಂಬಿಕೆಯಿದೆ. ಆದರೆ, ರಾಜ್ಯದ ಪರವಾಗಿ ವಾದ ಮಂಡಿಸಲು ನಾರೀಮನ್ ಅವರನ್ನೇ ಏಕೆ ಮುಂದುವರೆಸಬೇಕು? ನಾರಿಮನ್ ಅವರು ರಾಜ್ಯಕ್ಕೆ ಯಾವುದೇ ರೀತಿಯ ಸಹಾಯವನ್ನು ಮಾಡುತ್ತಿಲ್ಲ. ನಮ್ಮನ್ನು ಪ್ರತಿನಿಧಿಸಲು ರಾಜ್ಯದಲ್ಲಿ ಬೇರಾರು ಕಾನೂನು ತಜ್ಞರೇ ಇಲ್ಲವೇ? ನಾರಿಮನ್ ಅವರೇನು ದೇವರೇ? ಎಂದು ಪ್ರಶ್ನಿಸಿದ್ದಾರೆ.
ನ್ಯಾಯಾಲಯ ಹಾಗೂ ನ್ಯಾಯಮೂರ್ತಿಗಳನ್ನು ಟೀಕಿಸಬೇಡಿ ಎಂದು ಹೇಳುತ್ತೀರಿ. ಆದರೆ, ನ್ಯಾಯಮೂರ್ತಿಗಳು ಒಂದು ಸಲವಾದರೂ ನೀರು ಬಿಡಬೇಡಿ ಎಂದು ಹೇಳಿದ್ದಾರಾ?...ಪ್ರತೀ ಬಾರಿ ವಿಚಾರಣೆ ನಡೆದಾಗಲೂ ನಮ್ಮ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ನಾರಿಮನ್ ಅವರನ್ನು ಟೀಕಿಸಿದರೆ ದೇವರನ್ನೇ ಟೀಕಿಸಿದ್ದೇವೆನೋ ಎಂಬಂತೆ ಆಡುತ್ತೀರಿ. ರು. 75 ಕೋಟಿ ಹಣವನ್ನು ವಕೀಲರಿಗೆ ನೀಡಿದ್ದೀರಿ. ಆದರೂ ಅವರ ಬಗ್ಗೆ ನಾವು ಮಾತನಾಡುವಂತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ತಮಿಳುನಾಡಿಗೆ ನೀರು ಹರಿದು ಹೋಗುತ್ತಿದೆ. ಜೊತೆಗೆ ವಕೀಲರಿಗೂ ಹಣ ಹರಿದು ಹೋಗುತ್ತಿದೆ. ಇಷ್ಟೆಲ್ಲಾ ಆದರೂ ನಾರಿಮನ್ ಅವರು ನಾನು ವಾದ ಮಂಡಿಸುವುದಿಲ್ಲ ಎಂದು ಪಲಾಯನ ಮಾಡಿದ್ದಾರೆ. ಅ.18 ರಂದು ತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಗಳು ಬರುತ್ತಿವೆ. ಆದರೂ ನಾರಿಮನ್ ಅವರು ತಲೆ ಕೆಡಿಸಿಕೊಳ್ಳುತ್ತಿಲ್ಲ. ಇಂತಹ ವಕೀಲರನ್ನು ಮುಂದುವರೆಸಬೇಕೆ? ನಮ್ಮ ವಾದದಲ್ಲಿ ತಪ್ಪಿರಬಹುದು. ಹಾಗೆಂದ ಮಾತ್ರಕ್ಕೆ ತಮಿಳುನಾಡಿಗೆ ನೀರು ಹರಿಸಿ ಎಂದು ಸುಪ್ರೀಂ ಹೇಳುವುದು ಎಷ್ಟು ಸರಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.