ರಾಜಕೀಯ

ಮತ್ತೊಂದು ಹೈ-ವೋಲ್ಟೇಜ್ ಕದನಕ್ಕೆ ಸಿಎಂ ತವರು ಜಿಲ್ಲೆಯಲ್ಲಿ ಕಾಂಗ್ರೆಸ್ ಸಿದ್ಧತೆ

Shilpa D

ಮೈಸೂರು: ದೇವಾಲಯಗಳ ಪಟ್ಟಣ ಎಂದು  ಪ್ರಸಿದ್ಧಿ ಪಡೆದಿರುವ ನಂಜನಗೂಡಿನಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಜ್ಜಾಗುತ್ತಿದೆ. ಮುಂಬರುವ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿರುವ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ವಿರುದ್ಧ ಸಮರ ಸಾರಲು ಸಿದ್ಧರಾಮಯ್ಯ ಸಿದ್ಧತೆ ನಡೆಸುತ್ತಿದ್ದಾರೆ.

ಉಪ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಸಿದ್ದರಾಮಯ್ಯ ನಂಜನಗೂಡು ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗಾಗಿ ವಯಕ್ತಿಕ ಆಸಕ್ತಿ ತೋರಿದ್ದಾರೆ. ಈ ಉಪ ಚುನಾವಣೆ 2018ರ ವಿಧಾನ ಸಭೆ ಚುನಾವಣೆ ದಿಕ್ಸೂಚಿಯಾಗಿದ್ದು, ಆ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಸದೃಢಗೊಳಿಸಲು ನಿರ್ಧರಿಸಿದ್ದಾರೆ.

ಪ್ರತಿ ವಾರ್ಡ್ ಗಳಲ್ಲಿ ಪಕ್ಷದ ಕಾರ್ಯಕರ್ತರನ್ನು ಸಜ್ಜುಗೊಳಿಸುವ ಜವಾಬ್ದಾರಿಯನ್ನು ಲೋಕೋಪಯೋಗಿ ಸಚಿವ ಎಚ್.ಸಿ ಮಹಾದೇವಪ್ಪ,ಸಹಕಾರ ಸಚಿವ ಎಚ್.ಎಸ್ ಮಹದೇವ ಪ್ರಸಾದ್ ಹೆಗಲಿಗೆ ಸಿದ್ದರಾಮಯ್ಯ ನೀಡಿದ್ದಾರೆ. ಎಲ್ಲಾ ಪಕ್ಷಗಳ ಪಂಚಾಯಿತಿ ಮುಖಂಡರನ್ನು ಸಂಪರ್ಕದಲ್ಲಿಟ್ಟುಕೊಳ್ಳುವಂತೆ ಸೂಚಿಸಿದ್ದಾರೆ.

ನಂಜನಗೂಡಿನಲ್ಲಿ ಲಿಂಗಾಯತರೇ ಅಧಿಕ ಸಂಖ್ಯೆಯಲ್ಲಿದ್ದು, ಅವರೆಲ್ಲಾ ಪ್ರಸಾದ್ ಹಿಂಬಾಲಕರಾಗಿದ್ದಾರೆ, ಹೆಚ್ಚಿನ ಸಂಖ್ಯೆಯ ದಲಿತ ,ನಾಯಕ್ ಸಮುದಾಯದವರು ಶ್ರೀನಿವಾಸ್ ಪ್ರಸಾದ್ ರನ್ನು ಬೆಂಬಲಿಸುತ್ತಾರೆ. ಶ್ರೀನಿವಾಸ್ ಪ್ರಸಾದ್ ರ ಎಲ್ಲಾ ಟೀಕೆಗಳಿಘೂ ಇದುವರೆಗೂ ಸಿದ್ದರಾಮಯ್ಯ ಎಲ್ಲೂ ಪ್ರತಿಕ್ರಿಯೆ ನೀಡಿಲ್ಲ.  ದಲಿತ ನಾಯಕನನ್ನು ಸಂಪುಟದಿಂದ ಕಿತ್ತು ಹಾಕಿದ ಬಗ್ಗೆ ಇದುವರೆಗೂ ಸಿಎಂ ಎಲ್ಲಿಯೂ ತುಟಿ ಬಿಚ್ಚಲಿಲ್ಲ.

ಒಂದು ವೇಳೆ ಕಾಂಗ್ರೆಸ್ ನಾಯಕರು ಶ್ರೀನಿವಾಸ್ ಪ್ರಸಾದ್ ವಿರುದ್ಧ ಕಟು ಶಬ್ದಗಳಿಂದ ಟೀಕಿಸಿದರೇ ಅದು ಪ್ರಸಾದ್ ಗೆ ವರದಾನವಾಗುತ್ತದೆ. ಕಾಂಗ್ರೆಸೇತರ ಹಾಗೂ ದಲಿತರ ಅನುಕಂಪ ಗಿಟ್ಟಿಸಿ, ಮತಪಡೆಯಲು ಸಾಧ್ಯವಾಗುತ್ತದೆ ಎಂಬ ಭಯ, ಜೊತೆಗೆ ವಿರೋಧ ಪಕ್ಷಗಳು ಈಗಾಗಲೇ ಸಿದ್ದರಾಮಯ್ಯರನ್ನ ದಲಿತ ವಿರೋಧಿ ಎಂದು ಬಿಂಬಿಸುತ್ತಿರುವುದರಿಂದ ಎಲ್ಲಿಯೂ ಕಾಂಗ್ರೆಸ್ ನಾಯಕರು ಶ್ರೀನಿವಾಸ್ ಪ್ರಸಾದ್ ವಿರುದ್ಧ ಮಾತನಾಡದಂತೆ ಸಿದ್ದರಾಮಯ್ಯ ಕಟ್ಟಪ್ಪಣೆ ಮಾಡಿದ್ದಾರೆ,

 ಪ್ರಮುಖ ನಾಯಕರುಗಳಿಂದ  ಮೊದಲ ಹಂತದ ಚುನಾವಣಾ ಪ್ರಚಾರದಲ್ಲಿ 2 ಮೆಗಾ ರ್ಯಾಲಿ ಗಳನ್ನು ಆಯೋಜಿಸಲು ಸಚಿವ ಎಚ್. ಸಿ ಮಹಾದೇವಪ್ಪ ನಿರ್ಧರಿಸಿದ್ದಾರೆ. ಈ ವೇಳೆ ಸುಮಾರು 100 ಕೋಟಿ ರೂ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.

ಕಾಂಗ್ರೆಸ್ ಪಕ್ಷವನ್ನು ಬಲಗೊಳಿಸುವುದು ಹಾಗೂ ವಿಧಾನ ಸಭೆ ಕ್ಷೇತ್ರವನ್ನು ಅಭಿವೃದ್ಧಿಗೊಳಿಸುವುದಷ್ಟೇ ನಮ್ಮ ಉದ್ದೇಶ ಎಂದು ಮಹದೇವಪ್ಪ ತಿಳಿಸಿದ್ದಾರೆ. ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯನ್ನು ನಿಧಾನವಾಗಿ ಘೋಷಿಸಲಾಗುತ್ತದೆ.  ಮತ್ತೊಂದು ಹೈ-ವೋಲ್ಟೇಜ್ ಕದನಕ್ಕೆ ಕಾಂಗ್ರೆಸ್ ಸಿದ್ಧತೆ ನಡೆಸುತ್ತಿದೆ.

SCROLL FOR NEXT