ಬೆಂಗಳೂರು: ಕಾವೇರಿ ಹೋರಾಟದಿಂದ ದೂರ ಉಳಿದಿದ್ದ ಮಂಡ್ಯ ಕ್ಷೇತ್ರದ ಹಾಲಿ ಶಾಸಕರಾಗಿರುವ, ಜವಾಬ್ದಾರಿಯುತ ಸ್ಥಾನದಲ್ಲಿರುವ ಮಾಜಿ ಸಚಿವ ಅಂಬರೀಶ್ ಅವರು ಕಾವೇರಿ ವಿಚಾರ ಸಂಬಂಧ ರಾಜ್ಯ ಸರ್ಕಾರ ಕರೆದಿರುವ ವಿಶೇಷ ಅಧಿವೇಶನಕ್ಕೂ ಗೈರು ಆಗಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂಬ ನಿರ್ಣಯ ತೆಗೆದುಕೊಳ್ಳಲು ರಾಜ್ಯ ಸರ್ಕಾರ ಇಂದು ಐತಿಹಾಸಿಕ ವಿಶೇಷ ಅಧಿವೇಶನ ಕರೆದಿದ್ದು, ಈ ಅಧಿವೇಶನದಲ್ಲಿ ಭಾಗವಹಿಸುವಂತೆ ಅಂಬರೀಶ್ ಸೇರಿದಂತೆ ಎಲ್ಲಾ ಕಾಂಗ್ರೆಸ್ ಶಾಸಕರಿಗೂ ವಿಪ್ ಜಾರಿಗೊಳಿಸಲಾಗಿತ್ತು. ಆದರೆ ಪಕ್ಷದ ವಿಪ್ ಅನ್ನು ಉಲ್ಲಂಘಿಸಿ ಅಂಬರೀಶ್ ಅವರು ಅಧಿವೇಶನಕ್ಕೆ ಗೈರು ಆಗಿದ್ದಾರೆ.
ಮಂಡ್ಯ ಜಿಲ್ಲೆಯ ರೈತರು ಅನ್ನ ನೀರು ಬಿಟ್ಟು ಕಳೆದ ಒಂದು ವಾರದಿಂದ ಹೋರಾಟದಲ್ಲಿ ಭಾಗಿಯಾಗುತ್ತಿದ್ದಾರೆ. ಆದರೆ ಅಂಬರೀಶ್ ಮಾತ್ರ ಕಾವೇರಿ ಹೋರಾಟಕ್ಕೂ ತಮಗೂ ಸಂಬಂಧವಿಲ್ಲ ಎಂಬಂತೆ ಮೌನವಹಿಸಿದ್ದು, ಅವರ ಬೆಂಬಲಿಗರು ಹಾಗೂ ಅಭಿಮಾನಿಗಳು ರೊಚ್ಚಿಗೇಳುವಂತೆ ಮಾಡಿದೆ.
ಅಮೆರಿಕಾದಲ್ಲಿ ನಡೆದ 'ಅಕ್ಕ' ಸಮ್ಮೇಳನಕ್ಕೆ ತೆರಳಿದ್ದ ಅಂಬರೀಶ್ ಇದುವರೆಗೂ ಭಾರತಕ್ಕೆ ವಾಪಸ್ ಆಗಿಲ್ಲ ಎನ್ನಲಾಗುತ್ತಿದೆ.