ಬೆಂಗಳೂರು: ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ರಾಜ್ಯಕ್ಕೆ ಮತ್ತೆ ಅನ್ಯಾಯವಾಗಿದ್ದು, ಈ ಕುರಿತು ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಸಂಜೆ ಸರ್ವಪಕ್ಷ ಸಭೆ ಕರೆದಿದ್ದಾರೆ.
ಸುಪ್ರೀಂ ಕೋರ್ಟ್ ಶುಕ್ರವಾರ ತಮಿಳುನಾಡಿಗೆ ಮತ್ತೆ 32 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಹಾಗೂ ಮೂರು ದಿನದಲ್ಲಿ ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಮಾಡುವಂತೆ ಆದೇಶಿಸಿದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ನಾಳೆ ಸಂಜೆ 5 ಗಂಟೆಗೆ ವಿಧಾನಸೌಧದಲ್ಲಿ ಸರ್ವಪಕ್ಷಗಳ ಸಭೆ ಕರೆದಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದ ಪ್ರತಿ ಇನ್ನು ನನಗೆ ಸಿಕ್ಕಿಲ್ಲ. ಆದೇಶ ಪ್ರತಿ ಬಂದ ನಂತರ ಪ್ರತಿಕ್ರಿಯೆ ನೀಡುವುದಾಗಿ ಸಿಎಂ ವರದಿಗಾರರಿಗೆ ತಿಳಿಸಿದ್ದಾರೆ.
ಪ್ರಸ್ತೂತ ದೆಹಲಿಯಲ್ಲಿರುವ ಸಿದ್ದರಾಮಯ್ಯ ಅವರು, ಸುಪ್ರೀಂ ಕೋರ್ಟ್ ಆದೇಶದ ನಂತರ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದು, ನಾಳೆ ಸರ್ಪಪಕ್ಷಗಳ ಸಭೆಯ ನಂತರ ತಮಿಳುನಾಡಿಗೆ ನೀರು ಬಿಡುವ ಬಗ್ಗೆ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.
ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಮಧ್ಯಸ್ಥಿಕೆಯಲ್ಲಿ ನಡೆದ ಕರ್ನಾಟಕ ಮತ್ತು ತಮಿಳುನಾಡು ನಡುವಿನ ಸಭೆಯೂ ವಿಫಲವಾದ ನಂತರ ಇಂದು ಸುಪ್ರೀಂ ಕೋರ್ಟ್ ನಲ್ಲೂ ರಾಜ್ಯಕ್ಕೆ ಹಿನ್ನಡೆಯಾಗಿದ್ದು, ನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ ನ್ಯಾಯಮೂರ್ತಿ ಉದಯ್ ಲಲಿತ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ, ನಾಳೆಯಿಂದ ನಿತ್ಯ 6 ಸಾವಿರ ಕ್ಯೂಸೆಕ್ ನಂತೆ 6 ದಿನಗಳ ಕಾಲ ಒಟ್ಟು 32 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.