ಕಾಂಗ್ರೆಸ್ ಅಭ್ಯರ್ಥಿ ಪರ ಸಿಎಂ ಚುನಾವಣಾ ಪ್ರಚಾರ
ಮೈಸೂರು: ರಾಜ್ಯ ಸರ್ಕಾರವನ್ನು ಟೀಕಿಸಿರುವ ಎಸ್.ಎಂ.ಕೃಷ್ಣ ಅವರು ತಾವು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಯಾವ ರೀತಿಯ ಪರಿಸ್ಥಿತಿ ಉದ್ಭವಿಸಿತ್ತು ಎಂಬುದನ್ನು ಒಮ್ಮೆ ತಿರುಗಿ ನೋಡಲಿ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ನಂಜನಗೂಡು ಕ್ಷೇತ್ರದ ದೇಬೂರು ಹಾಗೂ ಹುಲ್ಲಹಳ್ಳಿ ಗ್ರಾಮದಲ್ಲಿ ಪ್ರಚಾರ ನಡೆಸಿದ ಸಿಎಂ ಸಿದ್ದರಾಮಯ್ಯ ಕೃಷ್ಣ ಹಿರಿಯ ನಾಯಕ. ಅವರ ದೂರಾಲೋಚನೆ ಕುರಿತು ನನ್ನ ತಕರಾರು ಇಲ್ಲ. ಆದರೆ, ಅವರು ಮುಖ್ಯಮಂತ್ರಿ ಆಗಿದ್ದಾಗ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕರ ಸಂಖ್ಯೆ140 ರಿಂದ 65ಕ್ಕೆ ಇಳಿದಿತ್ತು. ಹಲವಾರು ಸಚಿವರು ಸೋತಿದ್ದರು. ಆಗ ಯಾವ ರೀತಿಯ ಸರ್ಕಾರವಿತ್ತು ಎಂಬುದನ್ನು ಮೊದಲು ಮನವರಿಕೆ ಮಾಡಿಕೊಳ್ಳಲಿ ಎಂದು ಹೇಳಿದ್ದಾರೆ.
ಉಪ ಚುನಾವಣೆ ನಂತರ ಕಾಂಗ್ರೆಸ್ ಸರ್ಕಾರ ಉರುಳಿ ಬೀಳುತ್ತದೆ ಎಂಬ ಭ್ರಮೆಯಲ್ಲಿ ಬಿಜೆಪಿ ನಾಯಕರು ಇದ್ದಾರೆ, ಜ್ಯೋತಿಷ್ಯವನ್ನು ಪ್ರಬಲವಾಗಿ ನಂಬುವ ಯಡಿಯೂರಪ್ಪ ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಚಾಮರಾಜನಗರಕ್ಕೆ ಭೇಟಿ ನೀಡಿದರೇ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಭಯದಿಂದ ಒಮ್ಮೆಯೂ ಆ ಜಿಲ್ಲೆಗೆ ಭೇಟಿ ನೀಡಿಲ್ಲ. ಆದರೆ ನಾನು 6 ಬಾರಿ ಚಾಮರಾಜನಗರಕ್ಕೆ ಹೋಗಿದ್ದೇನೆ , ನಾನು ಅಧಿಕಾರ ಕಳೆದು ಕೊಂಡಿಲ್ಲ ಎಂದು ತಿಳಿಸಿದರು.
ಎರಡು ವರ್ಷಗಳ ಸರ್ಕಾರದ ಅಧಿಕಾರದ ನಂತರ ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡಿಸುವುದಿಲ್ಲ ಎಂದು ಹೇಳಿದ್ದರು, ನಾನು ಈಗಾಗಲೇ 12 ಬಜೆಟ್ ಮಂಡಿಸಿದ್ದೇನೆ, ಇನ್ನು ಒಂದು ಆಯವ್ಯಯ ಮಂಡಿಸಲಿದ್ದೇನೆ, ಮುಂದೆಯೂ ಬಜೆಟ್ ಮಂಡಿಸುತ್ತೇನೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics