ರಾಜಕೀಯ

ಕಾರ್ಯಕರ್ತರಿಗೆ ಹಣ ಹಂಚಿಕೆ ಆರೋಪ, ಲಕ್ಷ್ಮೀ ಹೆಬ್ಬಾಳಕರ್ ಬಂಧನಕ್ಕೆ ಬಿಜೆಪಿ ಆಗ್ರಹ

Lingaraj Badiger
ಚಾಮರಾಜನಗರ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ್‌ ಅವರು ಗುರುವಾರ ಗುಂಡ್ಲುಪೇಟೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಹಣ ಹಂಚುತ್ತಿರುವ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಪ್ರತಿಪಕ್ಷ ಬಿಜೆಪಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
ಕಾಂಗ್ರೆಸ್‌ ಹಣ ಹಂಚುವ ಮೂಲಕ ಉಪ ಚುನಾವಣೆಯಲ್ಲಿ ಗೆಲ್ಲಲು ಯತ್ನಿಸುತ್ತಿದ್ದು, ಹಣ ಹಂಚಿದ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಈ ಕೂಡಲೇ ಬಂಧಿಸಬೇಕು ಮತ್ತು ಈ ಬಗ್ಗೆ ತನಿಖೆ ನಡೆಸಬೇಕು ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರು ಒತ್ತಾಯಿಸಿದ್ದಾರೆ. ಅಲ್ಲದೆ ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ತಿಳಿಸಿದ್ದಾರೆ.
ಇನ್ನು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಭಾರತಿ ಶೆಟ್ಟಿ ಸಹ ಲಕ್ಷ್ಮೀ ಹೆಬ್ಬಾಳಕರ್ ಬಂಧನಕ್ಕೆ ಆಗ್ರಹಿಸಿದ್ದು, ಕಾಂಗ್ರೆಸ್ ನ ಎಲ್ಲಾ ನಾಯಕರು ಹಣ ಹಂಚುವುದರಲ್ಲಿ ತೊಡಗಿದ್ದು, ಚುನಾವಣಾ ಆಯೋಗ ಈ ಕೂಡಲೇ ಅವರ ವಿರುದ್ಧ ಕೇಸ್ ದಾಖಲಿಸಬೇಕು ಎಂದು ಹೇಳಿದ್ದಾರೆ.
ಲಕ್ಷ್ಮೀ ಹೆಬ್ಬಾಳಕರ್ ಅವರು ಚುನಾವಣಾ ಪ್ರಚಾರದ ವೇಳೆ ಚಾಮರಾಜನಗರ ಜಿಲ್ಲೆಯ ಕೆಬ್ಬಳ್ಳಿ ಜಿಲ್ಲಾ ಪಂಚಾಯತ್ ಕೇಂದ್ರದ ಹೆಣ್ಣೂರು ಕೇರಿಯ ಮನೆಯೊಂದರಲ್ಲಿ ಹಣ ಹಂಚಿದ್ದಾರೆ ಎನ್ನಲಾಗಿದ್ದು, ಕೈಯಲ್ಲಿ 2,000 ರುಪಾಯಿ ನೋಟಿನ ಕಟ್ಟು ಇದ್ದರೆ, ಇನ್ನೊಬ್ಬ ಮಹಿಳೆ ಏನೋ ಲೆಕ್ಕ ಬರೆಯುತ್ತಿರುವುದು ದೃಶ್ಯದಲ್ಲಿ ಕಂಡು ಬಂದಿದೆ. ರಹಸ್ಯವಾಗಿ ಸೆರೆ ಹಿಡಿದಿರುವ ಈ ವಿಡಿಯೋ ಇದೀಗ ಮಾಧ್ಯಮಗಳಲ್ಲಿ ಭಾರೀ ಸುದ್ದಿ ಮಾಡುತ್ತಿದೆ. 
ಏಪ್ರಿಲ್ 9 ರಂದು ಇಲ್ಲಿ ನಡೆಯಲಿರುವ ಉಪಚುನಾವಣೆಗೆ ಇನ್ನು ಮೂರೇ ದಿನ ಬಾಕಿ ಇರುವಾಗ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಹೀಗೆ ಹಣ ಹಂಚುತ್ತಿರುವ ವಿಡಿಯೋ ಮಾಧ್ಯಮಗಳಿಗೆ ಸಿಕ್ಕಿರುವುದು ಕಾಂಗ್ರೆಸ್ ನಾಯಕರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ.
SCROLL FOR NEXT