ಬೆಂಗಳೂರು: ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಆದಾಯ ತೆರಿಗೆ ಇಲಾಖೆ ಸಮನ್ಸ್ ಜಾರಿ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್, ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಐಟಿ ದಾಳಿ ನಂತರ ಸಮನ್ಸ್ ಜಾರಿ ಮಾಡುವುದು ಸಹಜ ಪ್ರಕ್ರಿಯೆ. ಯಾರದೇ ಮನೆ ಮೇಲೆ ದಾಳಿ ಮಾಡಿದ ನಂತರ ಮುಂದಿನ ಹಂತದ ವಿಚಾರಣೆಗೆ ಅಗತ್ಯವಿದ್ದರೆ ಸಮನ್ಸ್ ಜಾರಿ ಮಾಡುತ್ತಾರೆ. ವಶಪಡಿಸಿಕೊಳ್ಳಲಾದ ದಾಖಲೆಗಳಿಗೆ ಸಂಬಂಧಪಟ್ಟಂತೆ ವಿಚಾರಣೆ ನಡೆಸಲು ಆಗಿರುತ್ತದೆ. ಇಲಾಖೆ ಮುಂದೆ ವಿಚಾರಣೆಗೆ ಹಾಜರಾಗಲು ಆದಾಯ ತೆರಿಗೆ ಅಧಿಕಾರಿಗಳು ಮೊದಲೇ ದಿನಾಂಕ ಮತ್ತು ಸಮಯ ನೀಡುತ್ತಾರೆ ಎಂದು ಹೇಳಿದರು.
ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮನೆ ಮೇಲೆಯೂ ಕಳೆದ ಜನವರಿಯಲ್ಲಿ ಐಟಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವಿಷಯದಲ್ಲಿ ಅವರ ಅನುಭವವನ್ನು ಕೇಳಿದಾಗ, ವಿಚಾರಣೆ ಪ್ರಕ್ರಿಯೆ ಮುಗಿಯಲು ಕೆಲ ತಿಂಗಳುಗಳು ಬೇಕಾಗುತ್ತದೆ. ನನ್ನ ಕೇಸಿನಲ್ಲಿ ವಿಚಾರಣೆ ಪ್ರಕ್ರಿಯೆ ಮುಗಿಯುವ ಹಂತಕ್ಕೆ ಬಂದಿದೆ ಎಂದು ಉತ್ತರಿಸಿದರು.
ಶಿವಕುಮಾರ್ ಮತ್ತು ಅವರ ಸಂಬಂಧಿಕರ ಮನೆ ಮೇಲೆ ದಾಳಿ ನಡೆಸಿ ಶೋಧಿಸಿದ ವೇಳೆ ಸಿಕ್ಕಿರುವ ದಾಖಲೆಗಳಿಗೆ ಸಂಬಂಧಪಟ್ಟಂತೆ ಸಚಿವರು ವಿಚಾರಣೆಗೆ ಹಾಜರಾಗಲು ಸಮನ್ಸ್ ಜಾರಿ ಮಾಡಲಾಗಿದೆ.
ಈ ವಿಷಯವನ್ನು ಸ್ವತಃ ಸಚಿವ ಡಿ.ಕೆ.ಶಿವಕುಮಾರ್ ಅವರೇ ಸುದ್ದಿಗಾರರಿಗೆ ಖಚಿತಪಡಿಸಿದ್ದಾರೆ. ಆದಾಯ ತೆರಿಗೆ ಇಲಾಖೆಯಿಂದ ತಮಗೆ ಸಮನ್ಸ್ ಬಂದಿದೆ ಎಂದು ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics