ರಾಜಕೀಯ

ಉತ್ತರ ಪ್ರದೇಶ ಮಾದರಿಯಲ್ಲೇ ಕರ್ನಾಟಕದಲ್ಲೂ ಚುನಾವಣೆ ಎದುರಿಸುತ್ತೇವೆ: ಅಮಿತ್ ಶಾ

Lingaraj Badiger
ಬೆಂಗಳೂರು: 2018ರ ರಾಜ್ಯ ವಿಧಾನಸಭೆ ಚುನಾವಣೆಗೆ ಭರ್ಜರಿ ತಂತ್ರ ರೂಪಿಸುತ್ತಿರುವ ಚುನಾವಣಾ ಚಾಣಾಕ್ಷ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು, ಉತ್ತರ ಪ್ರದೇಶ ಮಾದರಿಯಲ್ಲೇ ಕರ್ನಾಟಕದಲ್ಲೂ ಚುನಾವಣೆ ಎದುರಿಸುವುದಾಗಿ ಶನಿವಾರ ತಿಳಿಸಿದ್ದಾರೆ.
ಇಂದಿನಿಂದ ಮೂರು ದಿನಗಳ ಭೇಟಿಗಾಗಿ ಬೆಂಗಳೂರಿಗೆ ಆಗಮಿಸಿರುವ ಅಮಿತ್ ಶಾ ಅವರು, ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಶಾಸಕರು, ಸಂಸದರು ಹಾಗೂ ಎಂಎಲ್ ಸಿಗಳಿಗೆ ಭರ್ಜರಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಉತ್ತರ ಪ್ರದೇಶದ ಮಾದರಿಯಲ್ಲೇ ಕರ್ನಾಟಕದಲ್ಲೂ ಚುನಾವಣೆ ಎದುರಿಸುತ್ತೇವೆ. ಚುನಾವಣೆ ವೇಳೆ ತಾವೇ ಖುದ್ದಾಗಿ ರಾಜ್ಯಕ್ಕೆ ಬಂದು ತಂತ್ರಗಾರಿಕೆ ರೂಪಿಸುವುದಾಗಿ ತಿಳಿಸಿದ್ದಾರೆ.
'ಕರ್ನಾಟಕದಲ್ಲಿ ಅಬ್ ಕಿ ಬಾರ್ ಬಿಜೆಪಿ ಸರ್ಕಾರ' ಎಂದ ಅಮಿತ್ ಶಾ, ಇದಕ್ಕಾಗಿ ಪ್ರತಿಯೊಬ್ಬರು ಬೂತ್ ಮಟ್ಟದಲ್ಲಿ ಕಾರ್ಯತಂತ್ರ ರೂಪಿಸಬೇಕು. ಶಾಸಕರು, ಸಂಸದರೇ ಬೂತ್ ಮಟ್ಟದ ಕೆಲಸಕ್ಕೆ ಹೊಣೆಗಾರರು. ಯಾವುದೇ ಅಸಮಾಧಾನಕ್ಕೆ ಅವಕಾಶ ಇಲ್ಲ, ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆ ಎದುರಿಸಬೇಕೆಂದು ಖಡಕ್ ಸಂದೇಶ ರವಾನಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಭ್ರಷ್ಟಾಚಾರವನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ ಹೋರಾಟ ರೂಪಿಸಿ. ಕಾಂಗ್ರೆಸ್ ಸರ್ಕಾರದ ಹಗರಣಗಳು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಾಚ್ ಹಗರಣ ಸೇರಿದಂತೆ ಭ್ರಷ್ಟಾಚಾರಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕು. ಜತೆಗೆ ಸರ್ಕಾರದ ಸಚಿವರುಗಳ ಭ್ರಷ್ಟಾಚಾರ, ಐಟಿ ದಾಳಿ ಇವುಗಳನ್ನು ಪ್ರಧಾನವಾಗಿಟ್ಟುಕೊಂಡು ಈಗಿನಿಂದಲೇ ಸರ್ಕಾರದ ವಿರುದ್ದ ಹೋರಾಟ ನಡೆಸುವಂತೆಯೂ ಅವರು ಮುಖಂಡರಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಇಂದಿನ ಕೋರ್ ಕಮಿಟಿ ಸಭೆಯಲ್ಲಿ ಪ್ರತ್ಯೇಕ ನಾಡಧ್ವಜ ವಿಚಾರ, ಲಿಂಗಾಯತ ಸ್ವತಂತ್ರ ಧರ್ಮ, ಮಹದಾಯಿ ನದಿ ವಿವಾದಗಳಲ್ಲಿ ಪಕ್ಷದ ನಿಲುವುಗಳು ಏನಾಗಿರಬೇಕು. ಈ ವಿಚಾರಗಳನ್ನು ಚುನಾವಣೆಯಲ್ಲಿ ಸಮರ್ಪಕವಾಗಿ ಬಳಸಿಕೊಳ್ಳುವ ಬಗ್ಗೆಯೂ ಚರ್ಚೆಗಳಾಗಿವೆ. ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕಾಂಗ್ರೆಸ್ ಪಕ್ಷದಿಂದ ಪ್ರಮುಖ ಮುಖಂಡರು ಹಾಗೂ ಕೆಲ ಶಾಸಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆಯೂ ಚರ್ಚೆಗಳು ನಡೆದಿವೆ ಎನ್ನಲಾಗಿದೆ.
SCROLL FOR NEXT