ಬೆಂಗಳೂರು: ಸದ್ಯ ನಡೆಯುವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಆಕಾಂಕ್ಷಿಯಾಗಿರುವ ಆರ್. ಬಿ ತಿಮ್ಮಾಪುರ ಸೇರಿದಂತೆ 8 ವಿಧಾನ ಪರಿಷತ್ ಸದಸ್ಯರುಗಳಿಗೆ ಸಂಕಷ್ಟ ಎದುರಾಗಿದೆ. ಈ ಎಂಟು ಎಂಎಲ್ ಸಿಗಳ ಹಣೆ ಬರಹವನ್ನು ಪರಿಷತ್ ಸಭಾಪತಿ ಡಿ.ಎಚ್ ಶಂಕರಮೂರ್ತಿ ನಿರ್ಧರಿಸಲಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (ಬಿಬಿಎಂಪಿ) ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಮೇಯರ್ ಚುನಾವಣೆ ವೇಳೆ, ಕಾಂಗ್ರೆಸ್ ಮತ್ತು ಜೆಡಿಎಸ್‌ನ ಎಂಟು ಮಂದಿ ವಿಧಾನಪರಿಷತ್ ತರಾತುರಿಯಲ್ಲಿ ತಮ್ಮ ವಿಳಾಸವನ್ನು ಬೆಂಗಳೂರಿಗೆ ಬದಲಿಸಿಕೊಂಡು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಂಡಿದ್ದರು.
ವಿಧಾನ ಪರಿಷತ್ ಸದಸ್ಯರಾದ ಕಾಂಗ್ರೆಸ್‌ನ ಆರ್.ಬಿ.ತಿಮ್ಮಾಪುರ, ಅಲ್ಲಂ ವೀರಭದ್ರಪ್ಪ, ರಘು ಆಚಾರ್, ಎನ್.ಎಸ್.ಬೋಸರಾಜ, ಎಸ್.ರವಿ, ಜೆಡಿಎಸ್‌ನ ಸಿ.ಆರ್.ಮನೋಹರ್, ಅಪ್ಪಾಜಿ ಗೌಡ ಮತ್ತು ಪಕ್ಷೇತರ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ ಅವರು ಮೇಯರ್ ಚುನಾವಣೆಯಲ್ಲಿ ಮತ ಚಲಾಯಿಸುವ ಉದ್ದೇಶದಿಂದ ನಗರದ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಬಿಬಿಎಂಪಿ ಆಯುಕ್ತರು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಅನಿಲ್ ಕುಮಾರ್ ಜಾ ಅವರಿಗೆ ವರದಿ ಸಲ್ಲಿಸಿದ್ದರು.
ಸದಸ್ಯರು ಬೆಂಗಳೂರಿನ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಸಿಕೊಂಡ ಬಳಿಕ ತಮ್ಮ ಹಳೆಯ ವಿಳಾಸ ನೀಡಿ ಟಿಎ, ಡಿಎ ಪಡೆದಿದ್ದಾರೆ. ಈ 8 ಮಂದಿ ಸದಸ್ಯರು ಮೇಯರ್ ಚುನಾವಣೆಯಲ್ಲಿ ಮತ ಚಲಾಯಿಸುವ ಉದ್ದೇಶದಿಂದ ನಗರದ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿರುವುದಾಗಿ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದಾರೆ.
ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಿ ಎಲ್ಲಾ ಆಯಾಮಗಳಿಂದ ಪರಿಶೀಲನೆ ನಡೆಸಿದ ಬಳಿಕ ಮೇಲ್ಮನೆ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನ ಪರಿಷತ್ ಸಭಾಪತಿ ಡಿ.ಎಚ್ ಶಂಕರಮೂರ್ತಿ ತಿಳಿಸಿದ್ದಾರೆ.