ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ರಾಜಕೀಯದಲ್ಲಿ ಸಕ್ರಿಯವಾಗಿರುವ ತನಕ ಮಾತ್ರ ತಾವು ರಾಜಕೀಯ ಮಾಡುವುದಾಗಿ ಅವರ ಪುತ್ರ ಹಾಗೂ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಅವರು ಶುಕ್ರವಾರ ಹೊಸ ಬಾಂಬ್ ಸಿಡಿಸಿದ್ದಾರೆ.
ಇಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಎಚ್ ಡಿ ರೇವಣ್ಣ ಅವರು, ನನ್ನ ಜೀವನದಲ್ಲಿ ದೇವೇಗೌಡರು ಇರೋ ತನಕ ನಾನು ರಾಜಕೀಯ ಮಾಡುತ್ತೇನೆ. ನಂತರ ರಾಜಕೀಯದಿಂದ ನಿವೃತ್ತಿ ಪಡೆದು ಮನೆಯಲ್ಲಿ ಕುಳಿತುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪುತ್ರ ಪ್ರಜ್ವಲ್ ರೇವಣ್ಣ ಸಹ ಸ್ಪರ್ಧಿಸುತ್ತಾರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ರೇವಣ್ಣ, ಕಳೆದ ಬಾರಿ ಭವಾನಿ ರೇವಣ್ಣ ಅವರು ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಟಿಕೆಟ್ ಸಿಕ್ತಾ?. ಇಲ್ಲ. ನಾನೇ ಟಿಕೆಟ್ ಗಾಗಿ ದೇವೇಗೌಡರಿಗೆ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಅರ್ಜಿ ಹಾಕಿದ್ದೇನೆ. ಪ್ರಜ್ವಲ್ ರೇವಣ್ಣ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ ದೇವೇಗೌಡರು ಯಾವಾಗ ಯಾರಿಗೆ ಬಾಂಬ್ ಹಾಕುತ್ತಾರೆ ಎಂಬುದು ಯಾರಿಗೂ ತಿಳಿಯಲ್ಲ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಇದೇ ವೇಳೆ, 2018ರ ವರೆಗೆ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ಕರೆ ನೀಡಿದ ರೇವಣ್ಣ, 2018ರಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದು ಖಚಿತ. ಅಧಿಕಾರಕ್ಕೆ ಬಂದ ಕೂಡಲೇ ನಮ್ಮ ಸರ್ಕಾರ ರೈತರ ಎಲ್ಲಾ ಸಾಲವನ್ನು ಮನ್ನಾ ಮಾಡಲಿದೆ. ಹೀಗಾಗಿ ಅಲ್ಲಿಯವರೆಗೆ ಕಾಯರಿ ಎಂದಿದ್ದಾರೆ.
ಜೆಡಿಎಸ್ ನಿಂದ ಮಾತ್ರ ಎಲ್ಲಾ ರೈತರ ಸಾಲ ಮನ್ನಾ ಮಾಡಲು ಸಾಧ್ಯ. ಜೆಡಿಎಸ್ ಬಿಟ್ಟು ಬೇರೆ ಯಾರಿಂದಲೂ ಸಾಲ ಮನ್ನಾ ಸಾಧ್ಯವಿಲ್ಲ ಎಂದ ರೇವಣ್ಣ ಅವರು, ಇದನ್ನು ಬೇಕಾದ್ರೆ ನಾನು ಛಾಪಾ ಕಾಗದದಲ್ಲಿ ಬರೆದು ಕೊಡುತ್ತೇನೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics