ಮೈಸೂರು: ಸ್ಯಾಂಡಲ್ವುಡ್ ನಟ ರಿಯಲ್ ಸ್ಟಾರ್ ಉಪೇಂದ್ರ ಅವರು ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದು ರಾಜಕೀಯ ಪಕ್ಷವನ್ನು ಸೃಷ್ಟಿಸಿದ್ದು ಹಳೆಯ ವಿಚಾರ.
ತಮ್ಮ ಪಕ್ಷದ ಕುರಿತಂತೆ ಮಾತನಾಡಿರುವ ಉಪೇಂದ್ರ ಅವರು ನನ್ನ 'ಕ್ಯಾಶ್‌ಲೆಸ್' ಕರ್ನಾಟಕ ಪ್ರಜಾಕೀಯ ಜನತಾಪಕ್ಷ(ಕೆಪಿಜೆಪಿ)ಕ್ಕೆ ಸಾರ್ವಜನಿಕರೊಂದಿಗೆ ನಿತ್ಯ ಸಂಪರ್ಕದಲ್ಲಿರುವ ಶ್ರಮಿಕರು ಬೇಕೇ ಹೊರತು ನಾಯಕರಲ್ಲ ಎಂದು ಹೇಳಿದ್ದಾರೆ.
ನನ್ನದು ಕ್ಯಾಶ್‌ಲೆಸ್ ಪಕ್ಷ. ಹೀಗಾಗಿ ಚುನಾವಣೆಯಲ್ಲಿ ನಾವು ಹಣವನ್ನು ಅಂಚುವುದಿಲ್ಲ. ಚುನಾವಣೆಗಾಗಿ ಕೋಟ್ಯಾಂತರ ರುಪಾಯಿ ಖರ್ಚು ಮಾಡುವವರು ತಾವು ಗೆದ್ದ ಮೇಲೆ ಚುನಾವಣೆಗೆ ಖರ್ಚು ಮಾಡಿರುವ ಹಣವನ್ನು ಹೇಗೆ ಹಿಂಪಡೆಯಬೇಕು ಎಂದು ಯೋಚಿಸುತ್ತಾರೆ ಅಂತಹವರು ನಮ್ಮ ಪಕ್ಷಕ್ಕೆ ಬೇಡ ಎಂದು ಹೇಳಿದರು.
ಇದೇ ವೇಳೆ ಮಹಾರಾಜ(ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್) ಅವರು ನಮ್ಮ ಪಕ್ಷಕ್ಕೆ ತಮ್ಮ ಬೆಂಬಲವನ್ನು ಘೋಷಿಸಿದ್ದಾರೆ. ಅವರಂತೆ ಹಲವು ವಿದ್ಯಾವಂತ ಜನರು ನಮ್ಮ ಪಕ್ಷವನ್ನು ಬೆಂಬಲಿಸಿದ್ದು ಅವರ ಹೆಸರುಗಳನ್ನು ಮುಂದೊಂದು ದಿನ ಬಹಿರಂಗಪಡಿಸುವುದಾಗಿ ಉಪೇಂದ್ರ ಹೇಳಿದರು.
ಜಾತಿ ರಾಜಕಾರಣ ಸ್ವೀಕಾರ್ಹವಲ್ಲ. ಇಂದು ಶೇಖಡ 70ರಷ್ಟು ರಾಜಕೀಯವು ಜಾತಿ ಆಧಾರಿತವಾಗಿದೆ. ಅದನ್ನು ಶೇಖಡ 100ರಷ್ಟಾಗಲು ನಾವು ಬಿಡಬಾರದು. ಗೆಲುವು ಅಥವಾ ಸೋಲು ನಮಗೆ ಮುಖ್ಯವಲ್ಲ. ಆದರೆ ಸಮಾಜಕ್ಕೆ ಇದರಿಂದ ಉತ್ತಮ ಸಂದೇಶವನ್ನು ಕಳುಹಿಸಬೇಕು. ಎಲ್ಲರು ಜಾತಿ ರಾಜಕಾರಣ ಅಥವಾ ಮತವನ್ನು ಪಡೆಯಲು ಹಣವನ್ನು ಅಂಚುತ್ತಾರೆ ಎಂದು ಹೇಳಲ್ಲ. ಕೆಲ ಉತ್ತಮ ರಾಜಕಾರಣಿಗಳು ಇದ್ದಾರೆ ಎಂದರು.