ಹುಬ್ಬಳ್ಳಿ: ಹತ್ಯೆಯಾದ ಧಾರವಾಡ ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯ ಯೋಗೀಶ್ ಗೌಡ ಅವರ ಪತ್ನಿ ಮಲ್ಲಮ್ಮ ಅವರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಅವರು ಭಾನುವಾರ ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಶೆಟ್ಟರ್, ಬಿಜೆಪಿಯವರ ಕಿರುಕುಳ ತಾಳಲಾಗದೆ ಮಲ್ಲಮ್ಮ ಕಾಂಗ್ರೆಸ್ ಸೇರಿದ್ದಾರೆ ಎಂದು ಕಲಬುರ್ಗಿಯಲ್ಲಿ ಸಿಎಂ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಯೋಗೀಶ್ ಗೌಡ ಹತ್ಯೆ ಸಂಬಂಧ ಒಂದು ವರ್ಷದಿಂದ ತನಿಖೆ ನಡೆದಿದೆ. ಹತ್ಯೆ ಪ್ರಕರಣ ಮುಚ್ಚಿಹಾಕಲು ಯೋಗೀಶ್ ಗೌಡ ಅವರ ಪತ್ನಿ ಮಲ್ಲಮ್ಮ ಅವರ ಮೇಲೆ ಒತ್ತಡ ಹೇರಲಾಗುತ್ತಿದೆ. ಯೋಗೀಶ್ ಗೌಡ ಅವರ ಹತ್ಯೆ ಪ್ರಕರಣ ಮುಚ್ಚಿಹಾಕಲು ವ್ಯವಸ್ಥಿತವಾದ ಪಿತೂರಿ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಮಲ್ಲಮ್ಮ ದಿಟ್ಟ ಮಹಿಳೆ. ಮಲ್ಲಮ್ಮ ಹೊರತಾಗಿಯು ನಮ್ಮ ಹೋರಾಟ ನಿರಂತರವಾಗಿ ನಡೆಯಲಿದೆ ಎಂದ ಶೆಟ್ಟರ್, ಯೋಗೀಶ್ ಗೌಡ ಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ ಈ ಕೂಡಲೇ ಸಿಬಿಐ ತನಿಖೆಗೆ ಒಪ್ಪಿಸಬೇಕು. ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವವರು ದೊಡ್ಡ ಸಾಧನೆ ಮಾಡಿದಂತೆ ಬೀಗುತ್ತಿದ್ದಾರೆ. ಇಂದಲ್ಲ ನಾಳೆ ಸತ್ಯ ಹೊರಗೆ ಬರುತ್ತದೆ ಎಂದು ವಾಗ್ದಾಳಿ ನಡೆಸಿದರು.