ರಾಜಕೀಯ

ಮಹದಾಯಿ ವಿವಾದ ನ್ಯಾಯಾಧೀಕರಣದಲ್ಲೇ ಇತ್ಯರ್ಥವಾಗಬೇಕು: ಬಿಎಸ್ ವೈಗೆ ಪರಿಕ್ಕರ್ ಪತ್ರ

Lingaraj Badiger
ಬೆಂಗಳೂರು: ಕರ್ನಾಟಕ ಮತ್ತು ಗೋವಾ ನಡುವಿನ ಮಹದಾಯಿ ವಿವಾದ ಬಗೆಹರಿಯಲು ಆಶಾದಾಯಕ ಸೂತ್ರ ಹೊರಬೀಳಲಿದೆ ಎಂಬ ವಿಶ್ವಾಸದಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರಿಗೆ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಗುರುವಾರ ಪತ್ರ ಬರೆದಿದ್ದು, ಮಹದಾಯಿ ವಿವಾದ ನ್ಯಾಯಾಧಿಕರಣದಲ್ಲೇ ಇತ್ಯರ್ಥವಾಗಬೇಕು ಎಂದು ಹೇಳಿದ್ದಾರೆ.
ಈ ಸಂಬಂಧ ಡಿಸೆಂಬರ್ 20ರಂದು ಯಡಿಯೂರಪ್ಪ ಅವರು ಬರೆದ ಪತ್ರಕ್ಕೆ ಗೋವಾ ಸಿಎಂ ಇಂದು ಉತ್ತರ ಬರೆದಿದ್ದು, ಕುಡಿಯುವ ನೀರಿನ ಉದ್ದೇಶಕ್ಕೆ ನೀರನ್ನು ಬಳಸಿಕೊಳ್ಳುವುದಕ್ಕೆ ಗೋವಾದ ತಾತ್ವಿಕ ವಿರೋಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 
ಡಿಸೆಂಬರ್ 20 ರಂದು ನೀವು ಬರೆದ ಪತ್ರ ನನಗೆ ತಲುಪಿದೆ. ತಾವು ಉತ್ತರ ಕರ್ನಾಟಕದ ಬರ ಪೀಡಿತ ಪ್ರದೇಶಗಳಿಗೆ ಮಹದಾಯಿಯಿಂದ 7.56 ಟಿಎಂಸಿಯಷ್ಟು ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಬಳಸಿಕೊಳ್ಳುವ ಸಂಬಂಧ ಪತ್ರ ಬರೆದಿದ್ದೀರಿ. ಈ ವಿವಾದ ನ್ಯಾಯಾಧೀಕರಣದ ಮುಂದೆ ಇರುವುದು ನಿಮಗೆ ಗೊತ್ತೇ ಇದೆ. ಕುಡಿಯುವ ನೀರು ವಿವಾದ ಕೂಡಾ ನ್ಯಾಯಾಧಿಕರಣದ ಮುಂದಿದೆ. ಕುಡಿಯುವ ನೀರಿನ ಉದ್ದೇಶಕ್ಕೆ ನೀರನ್ನು ಬಳಸಿಕೊಳ್ಳುವುದಕ್ಕೆ ಗೋವಾದ ತಾತ್ವಿಕ ವಿರೋಧ ಇಲ್ಲ ಎಂದಿದ್ದಾರೆ.
ಮಹದಾಯಿ ವಿವಾದ ಸಂಬಂಧ ನ್ಯಾಯಾಧೀಕರಣ ತೀರ್ಮಾನದಂತೆ ದ್ವಿಪಕ್ಷೀಯ ಮಾತುಕತೆಗೆ ನಾವು ಸಿದ್ಧರಿದ್ದೇವೆ. ಮಾನವೀಯ ಆಧಾರದ ಮೇಲೆ ಕುಡಿಯುವ ನೀರು ಕೇಳುತ್ತಿರುವುದು ಗೋವಾಕ್ಕೆ ಅರ್ಥವಾಗುತ್ತದೆ. ಬರ ಪೀಡಿತ ಪ್ರದೇಶಗಳಿಗೆ ಮಾನವೀಯ ಆಧಾರದ ಮೇಲೆ ನೀರು ಒದಗಿಸುವ ಸಂಬಂಧ ಸೌಹಾರ್ದ ಮಾತುಕತೆಗೆ ಸಿದ್ಧರಿದ್ದೇವೆ. ಆದರೆ ನಾವು ನ್ಯಾಯಾಧೀಕರಣದ ಎದುರು ಎತ್ತಿರುವ ನಮ್ಮ ಹಿತಾಸಕ್ತಿ ಮತ್ತು ನಮ್ಮ ವಿರೋಧಗಳಿಗೆ ಧಕ್ಕೆಯಾಗದಂತೆ ಪೂರ್ವಾಗ್ರಹವಿಲ್ಲದೇ ಈ ಮಾತುಕತೆ ನಡೆಯಬೇಕು ಎಂದಿದ್ದಾರೆ.
SCROLL FOR NEXT