ರಾಜಕೀಯ

ಮಹದಾಯಿ ವಿವಾದ; ಮಧ್ಯಸ್ಥಿಕೆ ವಹಿಸಲು ಪ್ರಧಾನಿ ನಿರಾಕರಣೆ: ಸಿಎಂ ಸಿದ್ದರಾಮಯ್ಯ

Lingaraj Badiger
ವಿಜಯಪುರ: ಕರ್ನಾಟಕ ಮತ್ತು ಗೋವಾ ನಡುವಿನ ಮಹದಾಯಿ ವಿವಾದ ಬಗೆಹರಿಸುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸಲು ನಿರಾಕರಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಹೇಳಿದ್ದಾರೆ. 
ಇಂದು ಗೋಕಾಕ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಮಹದಾಯಿ ವಿವಾದ ಬಗೆಹರಿಸುವ ಸಂಬಂಧ ನಾನು ಸರ್ವಪಕ್ಷಗಳ ನಿಯೋಗದೊಂದಿಗೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ, ಮಧ್ಯಸ್ಥಿಕೆ ವಹಿಸುವಂತೆ ಮನವಿ ಮಾಡಿದ್ದೆ. ಆದರೆ ಪ್ರಧಾನಿ ಮಧ್ಯಸ್ಥಿಕೆ ವಹಿಸಲು ನಿರಾಕರಿಸಿದರು. ಈಗ ರಾಜ್ಯ ವಿಧಾನಸಭೆ ಚುನಾವಣೆಯನ್ನು ಮುಂದಿಟ್ಟುಕೊಂಡು ರಾಜಕೀಯ ಲಾಭ ಪಡೆಯುವುದಕ್ಕಾಗಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು, ರಾಜ್ಯ ಬಿಜೆಪಿ ನಾಯಕರೊಂದಿಗೆ ಮತ್ತು ಗೋವಾ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದರು.
ಅಮಿತ್ ಶಾ ಸಭೆಯಲ್ಲಿ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಮಹದಾಯಿ ವಿವಾದದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಮತ್ತು ಈ ಬಗ್ಗೆ ರಾಜ್ಯ ಬಿಜೆಪಿ ನಾಯಕರು ಮೌನವಾಗಿರುವುದು ಏಕೆ? ಎಂದು ಸಿಎಂ ಪ್ರಶ್ನಿಸಿದ್ದಾರೆ.
ಮಹದಾಯಿ ನದಿ ವಿವಾದ ನ್ಯಾಯಾಧೀಕರಣಕ್ಕೆ ಸಲ್ಲಿಸಲು ನಮಗೆ ಗೋವಾ ಸರ್ಕಾರದಿಂದ ಲಿಖಿತ ಪ್ರತಿಕ್ರಿಯೆ ಮತ್ತು ಲಿಖಿತ ಭರವಸೆ ಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ನಿನ್ನೆಯಷ್ಟೇ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಗೋವಾ ಮುಖ್ಯಮಂತ್ರಿ ಮನೋಹರ್‌ ಪರಿಕ್ಕರ್‌, ಕೇಂದ್ರ ಸಚಿವ ಅನಂತಕುಮಾರ್‌, ಬಿಜೆಪಿ  ರಾಜ್ಯ ಉಸ್ತುವಾರಿ ಮುರಳೀಧರರಾವ್‌, ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್‌ ಜಾವಡೇಕರ್‌, ಸಹ ಚುನಾವಣಾ ಉಸ್ತುವಾರಿ ಪಿಯೂಷ್‌ ಗೋಯೆಲ್‌, ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್‌ ಶೆಟ್ಟರ್‌, ಸಂಸದ  ಪ್ರಹ್ಲಾದ್‌ ಜೋಶಿ ಮತ್ತಿತರರು ಮಹದಾಯಿ ವಿವಾದದ ಬಗ್ಗೆ ಸುದೀರ್ಘ‌ ಸಮಾಲೋಚನೆ ನಡೆಸಿದ್ದರು. 
SCROLL FOR NEXT