ಯಡಿಯೂರಪ್ಪ ಮತ್ತು ಕೆ.ಎಸ್ ಈಶ್ವರಪ್ಪ
ಬೆಂಗಳೂರು: ಕಳೆದ ಕೆಲ ತಿಂಗಳುಗಳಿಂದ ಹಾವು ಮುಂಗುಸಿಯಂತೆ ಪರಸ್ಪರ ಕಚ್ಚಾಡುತ್ತಿದ್ದ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಮಾಜಿ ಡಿಸಿಎಂ ಕೆ. ಎಸ್ ಈಶ್ವರಪ್ಪ ಸದ್ಯ ತಮ್ಮ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾಗಿದ್ದಾರೆ.
ಬಿಜೆಪಿ ರಾಜ್ಯ ಕಚೇರಿಯಲ್ಲಿ ಶನಿವಾರ ನಡೆದ ಹಿಂದುಳಿದ ಮೋರ್ಚಾದ ರಾಜ್ಯ ಕಾರ್ಯಕಾರಿಣಿಯಲ್ಲಿ ಅಕ್ಕಪಕ್ಕ ಕುಳಿತು, ಕುಶಲ ಸಂಭಾಷಣೆ ನಡೆಸಿದ ಇಬ್ಬರು ನಾಯಕರು ಒಂದೇ ವೇದಿಕೆಯಲ್ಲಿ ಬೃಹದಾಕಾರದ ಹೂವಿನ ಮಾಲೆಗೆ ಕೊರಳೊಡ್ಡಿ ಒಗ್ಗಟ್ಟು ಪ್ರದರ್ಶಿಸಿದರು.
ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಶ್ರಮಿಸುವುದಾಗಿ ಘೋಷಿಸಿದರು. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸಲಹೆಯಂತೆ ನಡೆದುಕೊಳ್ಳುತ್ತೇವೆ ಎಂದು ವೇದಿಕೆಯಲ್ಲಿ ವಾಗ್ದಾನ ಮಾಡಿದರು. ಈಶ್ವರಪ್ಪ ಅವರಿಗೆ ಉಸ್ತುವಾರಿ ವಹಿಸಿದ ಬಳಿಕ ಹಿಂದುಳಿದ ಮೋರ್ಚಾದ ಎರಡು ಸಮಾವೇಶ ಆಯೋಜಿಸಬೇಕು ಎಂದು ಅಂದುಕೊಂಡಿದ್ದೆವು. ಇದೇ 22 ಬೀದರ್‌ನಲ್ಲಿ ಹಾಗೂ 23ರಂದು ಯಾದಗಿರಿಯಲ್ಲಿ ಸಮಾವೇಶ ನಡೆಯಲಿದೆ ಎಂದರು.
ನಮ್ಮ ಮಧ್ಯೆ ಸಣ್ಣಪುಟ್ಟ ಗೊಂದಲ ಇದ್ದಿದ್ದು ನಿಜ. ಇಬ್ಬರನ್ನೂ ಒಟ್ಟಿಗೆ ಮಾತುಕತೆಗೆ ಕೂರಿಸಿದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು, ಇಬ್ಬರೂ ಒಂದಾಗಿ ರಾಜ್ಯದಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಸಲಹೆ ನೀಡಿದ್ದಾರೆ. ಪಕ್ಷದಲ್ಲಿ ಪ್ರಜಾಪ್ರಭುತ್ವ ಇರುವುದಕ್ಕೆ ಇದು ಸಾಕ್ಷಿ ಎಂದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಬೇಕು, ಯಡಿಯೂರಪ್ಪ ಮುಖ್ಯಮಂತ್ರಿ ಆಗಬೇಕು ಎಂಬುವುದಷ್ಟೆ ನಮ್ಮ ಆಸೆ. ಆ ದಿಕ್ಕಿನಲ್ಲಿ ನಾವೆಲ್ಲರೂ ಸೇರಿ ದುಡಿಯುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ಬಗ್ಗೆ ಜನರಿಗೆ ಭ್ರಮನಿರಸನ ಆಗಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಭ್ರಷ್ಟಾಚಾರ ಪ್ರಕರಣಗಳು ಒಂದೊಂದಾಗಿ ಹೊರಬರುತ್ತಿವೆ. ಗಲವು ಜನ ಪಕ್ಷ ಸೇರಲು ಬಯಸಿದ್ದಾರೆ. ಪಕ್ಷಕ್ಕೆ ಬರುವ ಎಲ್ಲರಿಗೂ ಸ್ವಾಗತ ಕೋರುತ್ತೇನೆ ಎಂದ ಅವರು ಮುಂಬರುವ ವಿಧಾನಸಭೆ ಚುನವಾಣೆಲ್ಲಿ 150 ಸೀಟು ಪಡೆಯುವ ವಿಶ್ವಾಸ ವ್ಯಕ್ತ ಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics