ರಾಜಕೀಯ

ನ್ಯಾ.ವಿಶ್ವನಾಥ ಶೆಟ್ಟಿ ಹೆಸರು ಶಿಫಾರಸು ಮಾಡುವ ಮುನ್ನ ಸತ್ಯಾಂಶ ಪರಿಶೀಲಿಸಿ: ಶೆಟ್ಟರ್

Manjula VN

ಹುಬ್ಬಳ್ಳಿ: ಲೋಕಾಯುಕ್ತ ಸ್ಥಾನಕ್ಕೆ ನ್ಯಾ.ವಿಶ್ವನಾಥ ಶೆಟ್ಟಿ ಅವರ ಹೆಸರನ್ನು ಶಿಫಾರಸು ಮಾಡುವುದಕ್ಕೂ ಮುನ್ನ ಸರ್ಕಾರ ಸತ್ಯಾಂಶಗಳನ್ನು ಪರಿಶೀಲನೆ ನಡೆಸಬೇಕು ಎಂದು ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಅವರು ಮಂಗಳವಾರ ಹೇಳಿದ್ದಾರೆ.

ಲೋಕಾಯುಕ್ತಕ್ಕೆ ನ್ಯಾ.ವಿಶ್ವನಾಥ ಶೆಟ್ಟಿ ಅವರನ್ನು ನೇಮಕ ಮಾಡಲು ಸರ್ಕಾರ ಶಿಫಾರಸು ಮಾಡಿರುವ ಹಿನ್ನಲೆಯಲ್ಲಿ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ್ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಸರ್ಕಾರ ಲೋಕಾಯುಕ್ತ ಸಂಸ್ಥೆಯ ಪಾವಿತ್ರ್ಯತೆಯನ್ನು ಹಾಳು ಮಾಡಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ವಿಶ್ವನಾಥ ಶೆಟ್ಟಿ ಅವರಿಗೆ ಸಂಬಂಧಿಸಿದ ಎಳ್ಲಾ ದಾಖಲೆಗಳನ್ನು ಸಂಗ್ರಹ ಮಾಡಲಾಗಿದ್ದು, ರಾಜ್ಯಪಾಲರಿಗೆ ಸಲ್ಲಿಸುವುದಾಗಿ ಹೇಳಿದ್ದರು.

ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಜಗದೀಶ್ ಶೆಟ್ಟರ್ ಅವರು, ಲೋಕಾಯುಕ್ತ ಸ್ಥಾನಕ್ಕೆ ನ್ಯಾಯಮೂರ್ತಿ ಆನಂತ್ ಭೈರರೆಡ್ಡಿ, ಎಂ,ಕೆ.ಪಾಟೀಲ್ ಮತ್ತು ಶೆಟ್ಟಿ ಅವರು ಪಟ್ಟಿಯಲ್ಲಿದ್ದರು.ವಿಶ್ವನಾಥ ಶೆಟ್ಟಿ ಅವರ ಆಯ್ಕೆಗೆ ಯಾರೊಬ್ಬ ಸದಸ್ಯರೂ ವಿರೋಧ ವ್ಯಕ್ತಪಡಿಸಿರಲಿಲ್ಲ. ಆದರೆ, ಸಮಿತಿಯ ಮುಖ್ಯಸ್ಥರಾಗಿರುವ ಮುಖ್ಯಮಂತ್ರಿಗಳಿಗೆ ಹೆಚ್ಚಿನ ಶಕ್ತಿಯಿದ್ದು, ಇದರಲ್ಲಿ ಒಬ್ಬರನ್ನು ಆಯ್ಕೆ ಮಾಡಿ ರಾಜ್ಯಪಾಲರಿಗೆ ಶಿಫಾರಸ್ಸು ಮಾಡಬೇಕು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶ್ವನಾಥ ಶೆಟ್ಟಿ ಅವರ ಹೆಸರನ್ನು ಶಿಫಾರಸ್ಸು ಮಾಡಿದ್ದು, ಇದೀಗ ಅವರ ವಿರುದ್ಧ ಆರೋಪಗಳು ವ್ಯಕ್ತವಾಗತೊಡಗಿವೆ. ಹೀಗಾಗಿ ಮತ್ತೆ ಸಿದ್ದರಾಮಯ್ಯ ಅವರು ಸತ್ಯಾಂಶಗಳನ್ನು ಪರಿಶೀಲನೆ ನಡೆಸಿ ರಾಜ್ಯಪಾಲರಿಗೆ ಹೆಸರನ್ನು ಶಿಫಾರಸ್ಸು ಮಾಡಬೇಕಿದೆ ಎಂದು ಹೇಳಿದ್ದಾರೆ.

ಪ್ರಸ್ತುತ ಚೆಂಡು ನ್ಯಾಯಾಲಯದ ಅಂಗಳದಲ್ಲಿಯೇ ಇದ್ದು, ಗೌರವಯುತ ಲೋಕಾಯುಕ್ತಕ್ಕೆ ಉತ್ತಮವಾದ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ತಿಳಿಸಿದ್ದಾರೆ. ಆದರೆ, ವಿಶ್ವನಾಥ್ ಶೆಟ್ಟಿಯವರು ಆಯ್ಕೆಗೆ ವಿರೋಧ ವ್ಯಕ್ತಪಡಿಸುವ ಕುರಿತಂತೆ ಯಾವುದೇ ಪ್ರತಿಕ್ರಿಯೆಗಳನ್ನು ನೀಡಿಲ್ಲ.

ವಿರೋಧ ಪಕ್ಷದ ನಾಯಕನಾಗಿರುವ ನಾನು ಮತ್ತು ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳೂ ಕೂಡ ಲೋಕಾಯುಕ್ತ ಆಯ್ಕೆ ಸಮಿತಿಯಲ್ಲಿದ್ದೇವೆ. ಆಯ್ಕೆ ಕುರಿತಂತೆ ಸರಿಯಾದ ರೀತಿಯಲ್ಲಿ ಮಾಹಿತಿ ನೀಡಿರಲಿಲ್ಲ. ಆಯ್ಕೆ ವೇಳೆ ನಮಗೆ ರೂಢಿಗತ ಪದ್ಧತಿಯೆಂಬಂತೆ ಆಹ್ವಾನ ನೀಡಲಾಗಿತ್ತು. ಸರ್ಕಾರ ತನಗೆ ಇಷ್ಟಬಂದವರನ್ನೇ ಆಯ್ಕೆ ಮಾಡಿದೆ. ಲೋಕಾಯುಕ್ತ ಆಯ್ಕೆ ಪ್ರಕ್ರಿಯೆಯಲ್ಲಿ ಸರ್ಕಾರ ಬದಲಾವಣೆಗಳನ್ನು ತರಬೇಕಿದೆ ಎಂದಿದ್ದಾರೆ.

ಇದೇ ವೇಳೆ ವೈದ್ಯರ ಮೇಲೆ ಹಲ್ಲೆ ನಡೆಸಿದ್ದ ಸಂಸದ ಅನಂತ್ ಕುಮಾರ್ ಹೆಗ್ಡೆ ವಿರುದ್ಧ ತೀವ್ರವಾಗಿ ಕಿಡಿಕಾರಿರುವ ಅವರು, ವೈದ್ಯರ ಮೇಲೆ ದಾಳಿ ನಡೆಸಿರುವುದು ಸರಿಯಲ್ಲ. ಪ್ರಕರಣವನ್ನು ಪಕ್ಷದ ಮುಖ್ಯಸ್ಥ ಬಿ.ಎಸ್.ಯಡಿಯೂರಪ್ಪ ಅವರ ಗಮನಕ್ಕೆ ತರಲಾಗಿದೆ. ಯಡಿಯೂರಪ್ಪ ಅವರೇ ಸೂಕ್ತ ರೀತಿಯ ಕ್ರಮಕೈಗೊಳ್ಳಲಿದ್ದಾರೆಂದು ಹೇಳಿದ್ದಾರೆ.

ನಂತರ ಶಾಸಕ ರಾಜು ಕಾಗೆ ಪ್ರಕರಣ ಕುರಿತಂತೆ ಪ್ರತಿಕ್ರಿಯೆ ನೀಡಲು ನಿರಾಕರಿಸಿರುವ ಅವರು, ಪ್ರಕರಣ ಸಂಬಂಧ ನನಗೆ ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ ಎಂದು ತಿಳಿಸಿದ್ದಾರೆ.

SCROLL FOR NEXT