ಬೆಂಗಳೂರು: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನನ್ನ ಮನೆ ಮೇಲೆ ದಾಳಿ ನಡೆಸಿದಾಗ 41 ಲಕ್ಷ ನಗದು ಪತ್ತೆಹಚ್ಚಿದ್ದಾರೆ ಎಂಬ ವರದಿಗಳ ಬಗ್ಗೆ ಕಿಡಿಕಾರಿರುವ ಸಚಿವ ರಮೇಶ್ ಜಾರಕಿಹೊಳಿ, 41 ಲಕ್ಷ ವಲ್ಲ, ನನ್ನ ಮನೆಯಲ್ಲಿ ಕೇವಲ 5 ಲಕ್ಷ ರು ಹಣ ಪತ್ತೆಯಾಗಿದ್ದರೂ ನಾನು ಅಧಿಕಾರ ತ್ಯಜಿಸುತ್ತೇನೆ ಎಂದು ಸವಾಲು ಹಾಕಿದ್ದಾರೆ.
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸಚಿವ ರಮೇಶ್ ಜಾರಕಿಹೊಳಿ ಮನೆ ಮೇಲೆ ದಾಳಿ ನಡೆಸಿ 162 ಕೋಟಿ ರು. ಆಸ್ತಿ, 41 ಲಕ್ಷ ರು ನಗದು ಹಾಗೂ 12 ಕೆಜಿ ಚಿನ್ನಾಭರಣ ಪತ್ತೆ ಹಚ್ಚಿದ್ದಾರೆ. ಹೀಗಾಗಿ ಅವರು ನೈತಿಕ ಹೊಣೆ ಹೊತ್ತು ರಾಜೀನೆಮ ನೀಡಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿದ ಹಿನ್ನೆಲೆಯಲ್ಲಿ ಜಾರಕಿಹೊಳಿ ಸವಾಲು ಹಾಕಿದ್ದಾರೆ.
ನನ್ನ ಮನೆಯಲ್ಲಿ ಸಿಕ್ಕಿದ್ದು 41 ಲಕ್ಷವಲ್ಲ 41 ಸಾವಿರ ರು. ಹಣ ಎಂದು ಸ್ಪಷ್ಟನೆ ನೀಡಿರುವ ಅವರು ನನ್ನ ಆಸ್ತಿಪಾಸ್ತಿಗಳ ಬಗ್ಗೆ ತಪ್ಪು ಮಾಹಿತಿ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಬಯಸಿದರೇ ನಾನು ಸಚಿವ ಸ್ಥಾನ ತ್ಯಜಿಸುವುದಾಗಿ ಹೇಳಿರುವ ಜಾರಕಿಹೊಳಿ, ಸಿದ್ದರಾಮಯ್ಯ ನನ್ನ ರಾಜೀನಾಮೆ ಕೇಳುವುದಿಲ್ಲ ಎಂಬ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.