ಪ್ರಜ್ವಲ್ ರೇವಣ್ಣ ಮತ್ತು ಕುಮಾರ ಸ್ವಾಮಿ
ಬೆಂಗಳೂರು: ಜೆಡಿಎಸ್‌ನಲ್ಲಿ ಸೂಟ್‌ಕೇಸ್ ಸಂಸ್ಕೃತಿ ಇದೆ ಎಂದು ಪ್ರಜ್ವಲ್ ರೇವಣ್ಣ ನೀಡಿದ್ದ ಹೇಳಿಕೆಯನ್ನು ಭಿನ್ನಮತೀಯರ ಕಡೆಗೆ ತಿರುಗಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಪ್ರಜ್ವಲ್ ಕ್ಷಮೆ ಕೋರುವ ಅವಶ್ಯಕತೆಯಿಲ್ಲ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು.ಈ ಹಿಂದೆ ಜೆಡಿಎಸ್‌ನಲ್ಲಿ ಸೂಟ್‌ಕೇಸ್ ಸಂಸ್ಕೃತಿ ಇದ್ದದ್ದು ನಿಜ, ಸೂಟ್‌ಕೇಸ್ ಪಡೆಯುತ್ತಿದ್ದವರು ಮುಂದಿನ ಸಾಲಿನಲ್ಲಿ ಕೂರುತ್ತಿದ್ದುದೂ ಹೌದು. ಆದರೆ, ಅವರೆಲ್ಲ ಈಗಾಗಲೇ ಪಕ್ಷ ಬಿಟ್ಟು ಹೋಗಿದ್ದಾರೆ. ಬಹುಶಃ ಅವರನ್ನು ಕುರಿತು ಪ್ರಜ್ವಲ್ ಹೇಳಿರಬಹುದು ಎಂದು ಹೇಳಿದರು.
ಪ್ರಜ್ವಲ್ ತಮ್ಮನ್ನು ಕುರಿತಾಗಿ ಆ ಹೇಳಿಕೆ ಕೊಟ್ಟಿಲ್ಲ, ತಮ್ಮ ಹೆಸರನ್ನೂ ಪ್ರಸ್ತಾಪಿಸಿಲ್ಲ. ಹೀಗಾಗಿ, ಅದರ ಬಗ್ಗೆ ಚರ್ಚೆ ಅನವಶ್ಯಕ. ತಮ್ಮನ್ನು ಕ್ಷಮೆ ಕೇಳ್ಳೋಕೆ ಪ್ರಜ್ವಲ್ ಯಾವುದೇ ತಪ್ಪು ಮಾಡಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ಮಾಧ್ಯಮಗಳಲ್ಲಿ ಪ್ರಕಟಗೊಳ್ಳುತ್ತಿದ್ದಂತೆ ಆಕ್ರೋಶಗೊಂಡಿರುವ ಶಾಸಕ ಜಮೀರ್ ಅಹಮದ್, ಕುಮಾರಸ್ವಾಮಿ ಹಿಟ್ ಅಂಡ್ ರನ್ ರಾಜಕಾರಣಿ. ನಮ್ಮನ್ನು ಕೆಣಕಿದರೆ ಸುಮ್ಮರುವುದಿಲ್ಲ. ಎಲ್ಲ ಬಿಚ್ಚಿಡಬೇಕಾಗುತ್ತದೆ ಎಂದು ತಿರುಗೇಟು ನೀಡಿದ್ದಾರೆ.
ಕುಮಾರಸ್ವಾಮಿ ಅಡ್ಡಗೋಡೆ ಮೆಲೆ ದೀಪ ಇಟ್ಟಂತೆ ಮಾತನಾಡದೆ ಸೂಟ್ ಕೇಸ್ ಪಡೆದವರು ಯಾರು ಅಂತ ನೇರವಾಗಿ ಹೇಳಲಿ. 3 ದಿನಗಳ ನಂತರ ನಮ್ಮನ್ನು ಟಾರ್ಗೆಟ್ ಮಾಡಿದ್ದಾರೆ. ನಮ್ಮನ್ನು ಕೆಣಕಿದರೆ ನಾವು ಬೀದಿಗೆ ಇಳಿಯಬೇಕಾಗುತ್ತದೆ. ನಮ್ಮ ಪಾಡಿಗೆ ನಮ್ಮನ್ನು ಬಿಡಲಿ. ಸೂಟ್‌ಕೇಸ್ ವಿಚಾರದಲ್ಲಿ ಬಹಿರಂಗ ಚರ್ಚೆಗೆ ನಾವು ಸಿದ್ಧ ಎಂದು ತಿರುಗೇಟು ನೀಡಿದರು.
ನಿಮ್ಮ ಮನೆ ವಿಚಾರ ನೀವು ಸರಿಪಡಿಸಿಕೊಳ್ಳಿ. ನಿಮ್ಮ ಕುಟುಂಬದ ಸಮಸ್ಯೆ ಮರೆಮಾಚಲು ನಮ್ಮ ಮೇಲೆ ಗೂಬೆ ಕೂರಿಸಲು ಬರಬೇಡಿ ಎಂದು ಕುಮಾರಸ್ವಾಮಿಗೆ ಜಮೀರ್ ಆಗ್ರಹಿಸಿದ್ದಾರೆ.
ಮಾಗಡಿ ಶಾಸಕ ಬಾಲಕೃಷ್ಣ, ಕುಮಾರಸ್ವಾಮಿ ಹೇಳಿಕೆ ಬಗ್ಗೆ ಬಹಿರಂಗ ಚರ್ಚೆಗೆ ನಾವು ಸಿದ್ಧ ಎಂದರು. ಎಲ್ಲ ಪಕ್ಷಗಳಲ್ಲೂ ಸೂಟ್‌ಕೇಸ್ ರಾಜಕೀಯ ಇದೆ. ಹಿಂದೆಯೂ ಕೆಲವರು ಪಕ್ಷಕ್ಕೆ ಸಹಾಯ ಮಾಡಿದ್ದಾರೆ. ಎಚ್.ಡಿ.ದೇವೇಗೌಡರು ಪ್ರಜ್ವಲ್ ಹೇಳಿಕೆ ಖಂಡಿಸಿದರು. ಅವರು ನಮ್ಮ ಹೆಸರು ಪ್ರಸ್ತಾಪಿಸಲಿಲ್ಲ. ಆದರೆ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿರುವ ಕುಮಾರಸ್ವಾಮಿ ಅನಾವಶ್ಯಕವಾಗಿ ನಮ್ಮತ್ತ ಬೆರಳು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.