ಬೆಂಗಳೂರು: 2018 ರ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೆಲ ತಿಂಗಳುಗಳ ಕಾಲ ರಾಜ್ಯದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಈ ಹಿನ್ನೆಲೆಯಲ್ಲಿ ಶಾ ಉಳಿದುಕೊಳ್ಳಲು ಹಾಗೂ ಚುನಾವಣಾ ತಂತ್ರಗಾರಿಕೆ ರೂಪಿಸಲು ಅನುಕೂಲವಾಗುವಂತೆ ನಗರದಲ್ಲಿ ಪ್ರತ್ಯೇಕ ಮನೆಯೊಂದನ್ನು ಮಾಡುವ ಸಂಬಂಧ ಅವರ ಬಿಜೆಪಿ ನಾಯಕರು ಪರಿಶೀಲನೆ ನಡೆಸಿದ್ದಾರೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಮನೆಯೊಂದನ್ನು ಮಾಡಲು ಉದ್ದೇಶಿಸಿರುವ ಅಮಿತ್ ಶಾ ಅವರಿಗಾಗಿ ಪ್ರತಿಷ್ಠಿತ ಕಟ್ಟಡ ನಿರ್ಮಾಣ ಸಂಸ್ಥೆಗೆ ಸೇರಿದ ವಿಲ್ಲಾವೊಂದನ್ನು ಗುರುತಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಚುನಾವಣೆ ಮುಗಿಯುವವರೆಗೆ ಇದನ್ನು ಬಳಸಲಾಗುತ್ತದೆ. ಇದರಲ್ಲಿ ಚುನಾವಣಾ ರಣತಂತ್ರಕ್ಕೆ ಅಗತ್ಯವಾದ ಎಲ್ಲ ರೀತಿಯ ಸಂವಹನ ತಂತ್ರಜ್ಞಾನ ಒಳಗೊಂಡ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿದೆ.
ಒಂದು ವೇಳೆ ಶಾ ಅವರಿಗಾಗಿ ನಗರದ ವ್ಯಾಪ್ತಿಯಲ್ಲೇ ಮನೆ ಮಾಡಿದಲ್ಲಿ ಭದ್ರತೆ ದೃಷ್ಟಿಯಿಂದ ಮತ್ತು ವಾಹನ ಸಂಚಾರ ದಟ್ಟಣೆ ಹಿನ್ನೆಲೆ ಸಮಸ್ಯೆಯಾಗಬಹುದು. ಅದರ ಬದಲು ವಿಮಾನ ನಿಲ್ದಾಣದ ಸಮೀಪವೇ ಮನೆ ಮಾಡುವುದರಿಂದ ಓಡಾಟಕ್ಕೆ ಅನುಕೂಲವಾಗುತ್ತದೆ ಎಂಬ ಲೆಕ್ಕಚಾರದಿಂದ ವಿಲ್ಲಾ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹಿರಿಯ ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.
ಉತ್ತರ ಪ್ರದೇಶ ವಿಧಾನ ಸಭೆ ಚುನಾವಣೆಯ ಯಶಸ್ಸಿನಿಂದ ಬೀಗುತ್ತಿರುವ ಬಿಜೆಪಿ ಕರ್ನಾ
ಕದಲ್ಲೂ ಅದೇ ರೀತಿಯ ಫಲಿತಾಂಶಕ್ಕಾಗಿ ತಯಾರಿ ನಡೆಸುತ್ತಿದೆ. ಮುಂಬರು ಗುಜರಾತ್ ಮತ್ತು ಕರ್ನಾಟಕ ವಿಧಾನಸಭೆ ಚುನಾವಣೆಗಳಲ್ಲಿ ಸಂಪೂರ್ಣ ಗಮನಹ ಹರಿಸಲು ಅಮಿತ್ ಶಾ ಸಿದ್ಧತೆ ನಡೆಸಿದ್ದಾರೆ.