ಬೆಂಗಳೂರು: ಯಾವುದೇ ನಿರ್ಧಿಷ್ಟ ಕಾರಣವಿಲ್ಲದೇ ನನ್ನ ವಿರುದ್ಧ ಕಾಂಗ್ರೆಸ್ ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಿರುವುದು ನನಗೆ ನೋವುಂಟು ಮಾಡಿದೆ ಎಂದು ವಿಧಾನ ಪರಿಷತ್ ಸಭಾಪತಿ ಡಿ.ಎಚ್ ಶಂಕರಮೂರ್ತಿ ಹೇಳಿದ್ದಾರೆ.
ಅವಿಶ್ವಾಸ ನಿರ್ಣಯದ ಸೂಚನೆಯು ನನ್ನ ವಿರುದ್ಧ ಯಾವುದೇ ನಿರ್ದಿಷ್ಟ ಆರೋಪ ಅಥವಾ ಪ್ರಕರಣ ಒಳಗೊಂಡಿಲ್ಲ, ನಾನು ಉತ್ತರಿಸಲು ಸಾಧ್ಯವಾಗದಿರುವುದರಿಂದ ಈ ಸೂಚನೆಯು ಅರ್ಹ ಮತ್ತು ಕ್ರಮಬದ್ಧವಾಗಿಲ್ಲ ಎಂದು ಶಂಕರಮೂರ್ತಿ ಹೇಳಿದ್ದಾರೆ.
ಹೀಗಿದ್ದರೂ ಸದನದ ಗಾಂಭೀರ್ಯವನ್ನು ಎತ್ತಿ ಬಿಜಿಯುವ ಉದ್ದೇಶದಿಂದ ಹಾಗೂ ಪ್ರಜಾಪ್ರಭುತ್ವ, ಮತ್ತು ಸಾಂವಿಧಾನಿಕ ತತ್ವಗಳ ಹಿತದೃಷ್ಟಿಯಿಂದ ನಿರ್ಣಯ ಮಂಡಿಸಲು ಅವಕಾಶ ನೀಡುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಅವಿಶ್ವಾಸ ನಿರ್ಣಯ ಮಂಡನೆ ಸಂಬಂಧ ಅಸಮಾಧಾನ ವ್ಯಕ್ತ ಪಡಿಸಿರುವ ಶಂಕರಮೂರ್ತಿ ಇದು ಉತ್ತಮ ಬೆಳವಣಿಗೆಯಲ್ಲ, ನಿರ್ಣಯವನ್ನು ಅಂಗೀಕರಿಸದೇ ಇರಬಹುದು, ಆದರೆ ಅದಕ್ಕೆ ನನ್ನ ಮನಸಾಕ್ಷಿ ಒಪ್ಪುವುದಿಲ್ಲ ಎಂದು ಶಂಕರಮೂರ್ತಿ ಅಭಿಪ್ರಾಯ ಪಟ್ಟಿದ್ದಾರೆ.
ನಾನು ಜೆಡಿಎಸ್ ಮತ್ತು ಬಿಜೆಪಿ ಬೆಂಬಲದಿಂದ ಪರಿಷತ್ ಸಭಾಪತಿಯಾಗಿದ್ದೇನೆ, ನನ್ನ ರಾಜೀನಾಮೆ ಕೇಳಲು ಉಗ್ರಪ್ಪ ಮತ್ತವರ ತಂಡದ ಸದಸ್ಯರಿಗೆ ನೈತಿಕ ಹಕ್ಕಿಲ್ಲ ಎಂದು ಹೇಳಿದ್ದಾರೆ.
ನನ್ನ ವಿರುದ್ಧ ಅವಿಶ್ವಾಸ ನಿರ್ಣಯ ಸಲ್ಲಿಸಿರುವುದು ನನಗೆ ಅಪಾರ ನೋವುಂಟು ಮಾಡಿದೆ. ಹೀಗಾಗಬಾರದಿತ್ತು. ಆದರೆ ಬಿಜೆಪಿ- ಜೆಡಿಎಸ್ ಬಹುಮತ ಹೊಂದಿದೆ, ಏನಾಗುತ್ತದೆ ಎಂಬುದನ್ನು ಕಾದು ನೋಡೋಣ ಎಂದು ಶಂಕರಮೂರ್ತಿ ತಿಳಿಸಿದ್ದಾರೆ.
ಶಂಕರಮೂರ್ತಿ ಅವರಿಗೆ ನೀಡಿರುವ ಬೆಂಬಲ ವಾಪಸ್ ಪಡೆದು ಕಾಂಗ್ರೆಸ್ ಜೊತೆ ಸೇರಿ ಬಸವರಾಜ ಹೊರಟ್ಟಿ ಅವರನ್ನು ಸಭಾಪತಿ ಮಾಡಲು ಈ ಹಿಂದೆ ಜೆಡಿಎಸ್ ನಿರ್ಧರಿಸಿತ್ತು. ಆದರೆ ಇದುವರೆಗೂ ಜೆಡಿಎಸ್ ತನ್ನ ಮುಂದಿನ ನಡೆ ಬಗ್ಗೆ ಎಲ್ಲಿಯೂ ತನ್ನ ಗುಟ್ಟು ಬಿಟ್ಟುಕೊಟ್ಟಿಲ್ಲ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos