ಬೆಳಗಾವಿ: ಬ್ಲೂ ಫಿಲಂ ಅಂದ್ರೆ ಏನು ಅಂತ ಅವರ ಸಂಪುಟದ ಮಾಜಿ ಸಚಿವರನ್ನು ಕೇಳಿದರೆ ಗೊತ್ತಾಗುತ್ತೆ ಎಂದು ಮಾಜಿ ಸಚಿವ ಹಾಗೂ ಹಾಲಿ ಬಿಜೆಪಿ ಶಾಸಕ ಲಕ್ಷ್ಮಣ ಸವದಿ ಅವರು ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.
ನಿನ್ನೆ ಅಥಣಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸವದಿ ಸದನದಲ್ಲಿ ಬ್ಲೂ ಫಿಲಂ ನೋಡಿದ್ದಾರೆ. ಅವರಿಗೆ ಮಾನ ಮರ್ಯಾದೆ ಇದ್ದರೆ ರಾಜಕೀಯ ನಿವೃತ್ತಿ ಪಡೆಯಬೇಕಾಗಿತ್ತು. ಆದರೆ ಬಿಜೆಪಿಯವರು ಭಂಡರು ಎಂದು ವಾಗ್ದಾಳಿ ನಡೆಸಿದ್ದರು.
ಈ ಬಗ್ಗೆ ಇಂದು ವರದಿಗಾರರಿಗೆ ಪ್ರತಿಕ್ರಿಯಿಸಿದ ಲಕ್ಷ್ಮಣ ಸವದಿ ಅವರು, ಸಿಎಂ ಬ್ಲೂ ಫಿಲಂ ಅಂದ್ರ ಏನು ಅಂತ ಜನರನ್ನು ಕೇಳುವ ಬದಲು ಅವರ ಸಂಪುಟದ ಮಾಜಿ ಸಚಿವರನ್ನು ಕೇಳಿದ್ರೆ ಗೊತ್ತಾಗುತ್ತದೆ ಎಂದು ತಿರುಗೇಟು ನೀಡಿದರು. ಅಲ್ಲದೆ ಸಿಎಂ ಸಿದ್ದರಾಮಯ್ಯ ಅವರು ಹಗಲಿನಲ್ಲಿ ನಿದ್ದೆ ಮಾಡುವುದು ಏಕೆ? ರಾತ್ರಿಯಲ್ಲ ಏನು ಮಾಡುತ್ತಾರೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನು ಸಿಎಂ ಅಥಣಿಯಿಂದ ಸ್ಪರ್ಧಿಸುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸವದಿ, ಸ್ಥಳೀಯ ಕಾಂಗ್ರೆಸ್ ನಾಯಕರಿಗೆ ನನ್ನ ವಿರುದ್ಧ ಸ್ಪರ್ಧಿಸುವ ಶಕ್ತಿ ಇಲ್ಲ ಎಂಬುದನ್ನು ಇದು ತೋರಿಸುತ್ತದೆ. ಅಲ್ಲದೆ ಸಿದ್ದರಾಮಯ್ಯ ಸ್ಪರ್ಧೆಯನ್ನು ನಾನು ಸ್ವಾಗತಿಸುತ್ತೇನೆ ಮತ್ತು ಅದನ್ನು ಸವಾಲಾಗಿ ಸ್ವಿಕರಿಸುತ್ತೇನೆ ಎಂದಿದ್ದಾರೆ.
ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಏಕ ವಚನದಲ್ಲಿ ಮಾತನಾಡುವುದು ಸರಿಯಲ್ಲ. ಅಥಣಿಯಿಂದ ಸ್ಪರ್ಧಿಸಿದೆರೆ ಸಿಎಂಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದರು.