ಜೆಡಿಎಸ್ ಮುಖ್ಯಸ್ಥ ಹೆಚ್.ಡಿ. ದೇವೇಗೌಡ
ಬೆಂಗಳೂರು: ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ನಲ್ಲಿ ಉಂಟಾಗಿರುವ ಅತಂತ್ರದಿಂದ ಹಾಗೂ ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದಿಂದ ಜನರು ಬೇಸತ್ತು ಹೋಗಿದ್ದು, ಇದೀಗ ಹೆಚ್.ಡಿ. ಕುಮಾರಸ್ವಾಮಿಯವರಿಗೆ ಅವಕಾಶ ನೀಡಲು ರಾಜ್ಯದ ಜನತೆ ಬಯಸಿದ್ದಾರೆಂದು ಜೆಡಿಎಸ್ ಮುಖ್ಯಸ್ಥ ಹೆಚ್.ಡಿ. ದೇವೇಗೌಡ ಅವರು ಬುಧವಾರ ಹೇಳಿದ್ದಾರೆ.
ಪ್ರೆಸ್ ಕ್ಲಬ್ ಮತ್ತು ವರದಿಗಾರರ ಕೂಟ ಜಂಟಿಯಾಗಿ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾವೇರಿಯಾಗಲೀ, ರೈಲ್ವೇ ಯೋಜನೆಯೇ ಆಗಲೀ ಪ್ರತೀಯೊಂದು ವಿಚಾರದಲ್ಲಿ ರಾಜ್ಯ ಕಳೆದುಕೊಳ್ಳುತ್ತಿದೆ. ಹೀಗಾಗಿಯೇ ಸ್ಥಳೀಯಪಕ್ಷ ಅಧಿಕಾರಕ್ಕೆ ಬರಬೇಕೆಂದು ರಾಜ್ಯ ಜನತೆ ಬಯಸಿದ್ದಾರೆ. ಪಕ್ಷವನ್ನು ರಕ್ಷಿಸಬೇಕೆಂದು ಬಯಸಿದ್ದಾರೆಂದು ಹೇಳಿದ್ದಾರೆ.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಕುಟುಂಬದಿಂದ ಇಬ್ಬರು ಮಾತ್ರ ಸ್ಪರ್ಧಿಸಲಿದ್ದಾರೆ. ಹೆಚ್.ಡಿ. ಕುಮಾರಸ್ವಾಮಿ ಮತ್ತು ಹೆಚ್ ಡಿ. ರೇವಣ್ಣ ಅವರಿಬ್ಬರೇ ಸ್ಪರ್ಧಿಸಲಿದ್ದಾರೆ. ಕುಮಾರಸ್ವಾಮಿ ರಾಮನಗರದಿಂದಲೇ ಸ್ಪರ್ಧಿಸಲಿದ್ದಾರೆ. ರೇವಣ್ಣ ಅಥವಾ ಇತರರು ಸ್ಪರ್ಧಿಸುತ್ತಾರೆ ಎಂಬ ಸುದ್ದಿಯಲ್ಲಿ ಹುರುಳಿಲ್ಲ. 7 ಅಮಾನತುಗೊಂಡ ಶಾಸಕರನ್ನು ಹೊರತುಪಡಿಸಿ ಇನ್ನುಳಿದ 33 ಮಂದಿ ಶಾಸಕರಿಗೂ ಟಿಕೆಟ್ ನೀಡಲಾಗುತ್ತದೆ ಎಂದು ತಿಳಿಸಿದರು.
ಇದೇ ವೇಳೆ ಕಾಂಗ್ರೆಸ್ ಹಿರಿಯ ನಾಯಕ ಎಸ್ಎಂ. ಕೃಷ್ಣ ಅವರು ಬಿಜೆಪಿಗೆ ಸೇರ್ಪಡೆಗೊಳ್ಳುವ ಬಗ್ಗೆ ಹೇಳಿಕೆ ನೀಡಲು ತಿರಸ್ಕರಿಸುವ ಅವರು, ಎಸ್.ಎಂ.ಕೃಷ್ಣ ಹಿರಿಯ ನಾಯಕ. ಅವರ ಬಗ್ಗೆ ಅಷ್ಟು ಸುಲಭವಾಗಿ ಮಾತನಾಡಬಾರದು. ರಾಜಕೀಯವಾಗಿ ಅವರಿಗೆ ಆಗಿರುವ ನೋವಿನ ಬಗ್ಗೆ ನಾನು ಹೇಳುವುದಕ್ಕೆ ಆಗುವುದಿಲ್ಲ. ರಾಜಶೇಖರಮೂರ್ತಿ ಬಿಜೆಪಿಗೆ ಬಂದ ನಂತರ ಮೈಸೂರು ಜಿಲ್ಲೆಯ ಟಿಕೆಟ್ ಹಂಚಿಕೆಯಲ್ಲಿ ಅವರ ಮಾತಿಗೆ ಕ್ಯಾರೇ ಎನ್ನಲಿಲ್ಲ. ಬಂಗಾರಪ್ಪ ಅವರಿಗೂ ಅದೇ ಗತಿಯಾಯ್ತು. ಜನರನ್ನು ಪ್ರತೀಬಾರಿ ಮೂರ್ಖರನ್ನಾಗಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಪ್ರಸ್ತುತ ಇರುವ ರಾಜಕೀಯ ಬೆಳವಣಿಗೆಗಳ ಕುರಿತಂತೆ ಮಾತನಾಡಿರುವ ಅವರು, ಬಿಜೆಪಿ ಪಕ್ಷ ಸಮಸ್ಯೆಗಳನ್ನು ಹುಟ್ಟುಹಾಕುತ್ತಿದೆ. ಮೋದಿಯವರ ಸಾಮರ್ಥ್ಯವನ್ನು ಗುರ್ತಿಸಲು ಆರ್'ಎಸ್ಎಸ್ ಆಗಲೀ ಅಥವಾ ಬಿಜೆಪಿಯಾಗಲೀ ಕಾರಣವಲ್ಲ. ಐದು ಕಾರ್ಪೊರೇಟ್ ಕಂಪನಿಗಳು ಮೋದಿಯವರ ಸಾಮರ್ಥ್ಯವನ್ನು ಗುರ್ತಿಸಿತ್ತು. ಭಾಷಣ ಮಾಡುವುದರಲ್ಲಿ ಮೋದಿ ಉತ್ತಮ ನಾಯಕ. ವಾರಣಾಸಿಯಲ್ಲಿ ಅಧಿಕಾರ ನಡೆಸಿದ್ದ ಎರಡು ವರ್ಷಗಳ ಕಾಲ ಉತ್ತಮ ಕಾರ್ಯಗಳನ್ನು ಮಾಡಿದ್ದರೆ, ಇಂದು ಮೂರು ದಿನಗಳ ಕಾಲ ರ್ಯಾಲಿ ನಡೆಸುವ ಅಗತ್ಯವಿರುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.