ರಾಜಕೀಯ

ಉತ್ತರ ಪ್ರದೇಶ ಫಲಿತಾಂಶ ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲೂ ಮರುಕಳಿಸಲಿದೆ: ಬಿಎಸ್ ವೈ

Lingaraj Badiger
ಬೆಂಗಳೂರು: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಫಲಿತಾಂಶ ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲೂ ಮರುಕಳಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಶನಿವಾರ ಹೇಳಿದ್ದಾರೆ.
ಐದು ರಾಜ್ಯಗಳ ಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರ ಇಂದು ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ್ ಎರಡೂ ರಾಜ್ಯದ ಮತದಾರರು ನೋಟ್ ನಿಷೇಧವನ್ನು ಬೆಂಬಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ‘ಎಲ್ಲರೊಂದಿಗೆ ಎಲ್ಲರ ವಿಕಾಸ‘ಕ್ಕೆ ಜನ ಬೆಂಬಲ ನೀಡಿದ್ದಾರೆ. ಮೋದಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಹೋರಾಟಕ್ಕೆ ಗೆಲುವು ಸಿಕ್ಕಿದೆ ಎಂದರು.
ಸ್ವತಂತ್ರ್ಯ ಭಾರತದ ಇತಿಹಾಸದಲ್ಲಿ 26 ವರ್ಷಗಳ ನಂತರ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಬಹಮತ ಸಿಕ್ಕಿದೆ. ಉತ್ತರಾಖಂಡದಲ್ಲೂ ನಮಗೆ ಬಹುಮತ ಸಿಕ್ಕಿದೆ. ಪಂಜಾಬ್‌‌ನಲ್ಲಿ ಕಾಂಗ್ರೆಸ್ ಗೆಲ್ಲುವ ಬಗ್ಗೆ ಮೊದಲೇ ನಿರೀಕ್ಷೆ ಮಾಡಿದ್ದೆವು ಎಂದರು.
ಇದೇ ವೇಳೆ ಉತ್ತರ ಪ್ರದೇಶದಂತೆ ರಾಜ್ಯದ ಮತದಾರರು ಸಹ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸವಿದೆ. ಈ ಫಲಿತಾಂಶ ಮುಂದಿನ ಚುನಾವಣೆಗೆ ದಿಕ್ಸೂಚಿಯಾಗಲಿದೆ. ನಂಜನಗೂಡು ಮತ್ತು ಗಂಡ್ಲುಪೇಟೆಯಲ್ಲೂ ನಾವು ಗೆಲುವು ಸಾಧಿಸುತ್ತೇವೆ. ಹಣದ ಬಲ, ಹೆಂಡದ ಬಲೆ, ತೋಳ್ಬದ ಮೂಲಕ ಗೆಲ್ಲುತ್ತೇವೆ ಅನ್ನೋ ಉತ್ಸಾಹದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜನ ಪಾಠ ಕಲಿಸ್ತಾರೆ ಎಂದರು.
ಮುಂದೆ ಬಿಜೆಪಿ 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲೋದಕ್ಕೆ ಈ ಫಲಿತಾಂಶ ದಿಕ್ಸೂಚಿ. ರಾಜ್ಯ ಸರ್ಕಾರದ ಅನೇಕ ಅಕ್ರಮದ ದಾಖಲೆಗಳು ನಮ್ಮ ಬಳಿ ಇದೆ. ಡೈರಿ ಹಗರಣ, ಬಿಬಿಎಂಪಿ ಹಗರಣವನ್ನ ಬಯಲು ಮಾಡುತ್ತೇವೆ. ಉಪ ಚುನಾವಣೆಯಲ್ಲಿ ಜನ ನಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ ಎಂದು ಮಾಜಿ ಸಿಎಂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
SCROLL FOR NEXT