ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮಾಜಿ ಸಂಸದ, ಹಿರಿಯ ಕಾಂಗ್ರೆಸ್ ನಾಯಕ ಎಚ್ ವಿಶ್ವನಾಥ್ ಅವರು, ಸಿದ್ದರಾಮಯ್ಯ ಅವರು ರಾಜ್ಯ ಕಾಂಗ್ರೆಸ್ ನಾಯಕರಿಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ವಿಶ್ವನಾಥ್ ಅವರು, ನಾನು ಕಾಂಗ್ರೆಸ್ ಪಕ್ಷ ಸೇರುವುದರಲ್ಲಿ ರಾಜ್ಯ ನಾಯಕರ ಪಾತ್ರವಿಲ್ಲ ಎಂಬ ಅವರ ಹೇಳಿಕೆ ಹಾಸ್ಯಾಸ್ಪದ. ಮುಖ್ಯಮಂತ್ರಿಗಳಾದವರಿಗೆ ಕನಿಷ್ಟ ಪಕ್ಷ ಕಾಮನ್ ಸೆನ್ಸ್ ಇರಬೇಕು. ಕೆಪಿಸಿಸಿ ಅನುಮತಿ ಇಲ್ಲದೆ ಕೇಂದ್ರದ ವರಿಷ್ಟರು ಪಕ್ಷ ಸೇರಲು ಗ್ರೀನ್ ಸಿಗ್ನಲ್ ನೀಡಲು ಸಾಧ್ಯವೇ ಎಂದು ತಿರುಗೇಟು ನೀಡಿದ್ದಾರೆ.
ಕೆಪಿಸಿಸಿ ಸಮ್ಮತಿಯಿಲ್ಲದೇ ಪಕ್ಷ ಸೇರಲು ಸಾಧ್ಯವಿಲ್ಲ ಎನ್ನುವ ಕಾಮನ್‌ಸೆನ್ಸ್ ಸಿದ್ದರಾಮಯ್ಯನವರಿಗೆ ಇದೆಯೋ ಇಲ್ಲವೋ ಗೊತ್ತಿಲ್ಲ. ನೀವು ಸೋನಿಯಾ ಗಾಂಧಿಯವರನ್ನು ಸಂಪರ್ಕಿಸಿರಬಹುದು. ಅಹ್ಮದ್ ಪಟೇಲ್‌ರನ್ನು ಸಂಪರ್ಕಿಸಿರಬಹುದು. ಆದರೆ. ಸಾಮಾನ್ಯ ಪ್ರಕ್ರಿಯೆಯಂತೆ ಕೆಪಿಸಿಸಿ ಸಮ್ಮತಿಯಿಲ್ಲದೇ ಪಕ್ಷ ಸೇರ್ಪಡೆ ಅಸಾಧ್ಯ ಎನ್ನುವುದು ನಿಮಗೆ ಗೊತ್ತಿಲ್ಲವೇ ಎಂದು ಲೇವಡಿ ಮಾಡಿದ್ದಾರೆ.
ಸಿದ್ದರಾಮಯ್ಯ ಅವರಿಗೆ ಕೃತಜ್ಞತೆಯೇ ಇಲ್ಲ. ಅವರು ಕರ್ನಾಟಕ ಕಾಂಗ್ರೆಸ್ ಹೈಕಮಾಂಡ್ ರೀತಿ ವರ್ತಿಸುತ್ತಿದ್ದಾರೆ. ಸಿದ್ದರಾಮಯ್ಯನವರೇ ನೀವು ಕನಕದಾಸರ ಅನುಯಾಯಿ. ಅವರು ನಾನು ಎನ್ನಬೇಡ ಎಂದಿದ್ದಾರೆ. ಆದರೆ ನಿಮಗೆ ನಾನು ಎನ್ನುವ ಅಹಂಕಾರವಿದೆ ಎಂದು ಮಾಜಿ ಸಂಸದ ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯ ಅವರು ಜೆಡಿಎಸ್‌ನಲ್ಲಿದ್ದ ನನ್ನನ್ನು ಕಾಂಗ್ರೆಸ್‌ಗೆ ಕರೆ ತಂದಿದ್ದು ಸ್ಥಳೀಯ ನಾಯಕರಲ್ಲ ಎನ್ನುವ ಮೂಲಕ ಅಂದಿನ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಸೇರಿದಂತೆ ಇತರೆ ರಾಜ್ಯ ನಾಯಕರಿಗೆ ಅಪಮಾನ ಮಾಡಿದ್ದಾರೆ. ಅವರ ಮಾತು ಕೇಳಿದ್ರೆ ಸುಳ್ಳುಗಾರ ಎನ್ನುವುದು ತಿಳಿಯುತ್ತದೆ ಎಂದು ವಿಶ್ವಾನಾಥ್ ಹೇಳಿದ್ದಾರೆ.
ನಾನು ರಾಜಕಾರಣದಲ್ಲಿ ನಿಮಗಿಂತ ಹಿರಿಯವನು. ವಿದ್ಯಾರ್ಥಿ ದಿಸೆಯಿಂದಲೇ ದೇವರಾಜ ಅರಸು ಸೇರಿದಂತೆ ಹಿರಿಯ ನಾಯಕರ ಜೊತೆ ಕಳೆದ ನಾಲ್ಕು ದಶಕಗಳಿಂದ ಯಾವುದೇ ಕಪ್ಪು ಚುಕ್ಕೆಗಳಿಲ್ಲದೇ ರಾಜಕಾರಣ ಮಾಡಿದ್ದೇನೆ. ದೇವರಾಜ ಅರಸ್, ಇಂದಿರಾಗಾಂಧಿ ಅವರಿಂದ ರಾಜಕಾರಣಕ್ಕೆ ಧುಮುಕಿದೆನು. ಸಿದ್ದರಾಮಯ್ಯ ಅವರು ಮಾಜಿ ಪ್ರಧಾನಿ ದೇವೇಗೌಡ ಅವರಿಂದ ರಾಜಕಾರಣಕ್ಕೆ ಬಂದವರು. ರಾಜಕಾರಣದಲ್ಲಿ ನಾವಿಬ್ಬರೂ ವಿರುದ್ಧ ದಿಕ್ಕಿನಲ್ಲಿದ್ದೆವು ಎಂಬುದನ್ನು ಮರೆಯಬಾರದು.ರಾಜ್ಯದ ಹಿರಿಯ ನಾಯಕರ ಸಹಕಾರದಿಂದ ನೀವು ಕಾಂಗ್ರೆಸ್ ಗೆ ಸೇರ್ಪಡೆಯಾದ ನಂತರ ನಾವು ಒಟ್ಟಾದೆವು. ನೀವು ಅಹಮದ್ ಪಟೇಲ್ ಹಾಗೂ ಸೋನಿಯಾಗಾಂಧಿ ಅವರನ್ನು ಸಂಪರ್ಕಿಸಿ ಕಾಂಗ್ರೆಸ್ ಸೇರಿರಬಹುವುದು . ಆದರೇ ಕೆಪಿಸಿಸಿ ಅನುಮತಿ ಇಲ್ಲದೆ ಪಕ್ಷ ಸೇರ್ಪಡೆ ಸಾಧ್ಯವೇ ಇಲ್ಲ ಎಂದು ಗುಡುಗಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics