ರಾಜ್ಯ ಉಸ್ತುವಾರಿ ವೇಣುಗೋಪಾಲ್ ಜೊತೆ ಸಿದ್ದರಾಮಯ್ಯ
ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗಾಗಿ ಕಾಂಗ್ರೆಸ್ ತಯಾರಿ ಆರಂಭಿಸಿದೆ. ಈ ನಿಟ್ಟಿನಲ್ಲಿ ಪಕ್ಷದಲ್ಲಿ ಆಂತರಿಕ ಚಟುವಟಿಕೆಗಳು ಗರಿಗೆದರಿವೆ.
ಎಐಸಿಸಿ ಪ್ರದಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಬೆಂಗಳೂರಿಗೆ ಆಗಮಿಸಿದ್ದು, ಎಲ್ಲಾ ಜಿಲ್ಲೆಯ ಕಾಂಗ್ರೆಸ್ ಮುಖಂಡರೊಂದಿಗೆ ಸಮಾಲೋಚನೆ ಆರಂಭಿಸಿದ್ದಾರೆ.
ಸ್ಥಳೀಯ ಮಟ್ಟಗ ಸಮಸ್ಯೆಗಳ ಬಗ್ಗೆ ಜಿಲ್ಲಾ ನಾಯಕರುಗಳ ಬಳಿ ವಿಚಾರಿಸಲಾಗುತ್ತಿದೆ. ಅಸಮಾಧಾಗೊಂಡ ಯಾವುದೇ ಸ್ಥಳೀಯ ನಾಯಕರು ಪಕ್ಷ ಬಿಡುತ್ತಾರೆ ಎಂಬ ವಿಷಯತಿಳಿದ ಕೂಡಲೇ ಬೂತ್ ಮಟ್ಟದಲ್ಲೇ ಸಮಿತಿ ರಚಿಸಿ ಅಸಮಾಧಾನ , ಗೊಂದಲ ಬಗೆಹರಿಸಲು ಸೂಚಿಸಲಾಗಿದೆ.
ಈ ಹಿಂದೆ ಬೆಂಗಳೂರಿಗೆ ಆಗಮಿಸಿದ್ದ ವೇಣು ಗೋಪಾಲ್ 3 ದಿನಗಳ ಸಮಾಲೋಚನೆ ನಡೆಸಿದ್ದರು.ಜಿಲ್ಲಾ ಮುಖ್ಯಸ್ಥರು ಹಾಗೂ ಅಸಮಾಧಾನಗೊಂಡಿದ್ದ ಕೆಲ ನಾಯಕರಿಗೆ ವೇಣುಗೋಪಾಲ್ ಅವರನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಎಲ್ಲಾ ಜಿಲ್ಲೆಯ ಮುಖಂಡರೊಂದಿಗೆ ವೇಣುಗೋಪಾಲ್ ಚರ್ಚೆ ನಡೆಸಲಿದ್ದಾರೆ.
ಕಳೆಗದ ಭಾನುವಾರ ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಕೂಡ ಮುಗಿದಿದ್ದು, ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಬಿಜೆಪಿಯವರ ಮಿಷನ್-150 ಗೆ ವಿರುದ್ಧವಾಗಿ ಕಾಂಗ್ರೆಸ್ ತಂತ್ರ ರೂಪಿಸುತ್ತಿದೆ.
ಇನ್ನೂ ಸತೀಶ್ ಜಾರಕಿಹೊಳಿ ಹಾಗೂ ರಮೇಶ್ ಜಾರಕಿಹೊಳಿ ನಡುವಿನ ಮುಸುಕಿನ ಗುದ್ದಾಟದಿಂದ ಬೆಳಗಾವಿ ಜಿಲ್ಲೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗುತ್ತಿದ್ದು, ಭಿನ್ನಾಭಿಪ್ರಾಯ ಬದಿಗೊತ್ತಿ ಕೆಲಸ ಮಾಡುವಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರಿಗೆ ಕಿವಿಮಾತು ಹೇಳಿದ್ದಾರೆ.
ಬೆಳಗಾವಿ ಅತಿ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಜಿಲ್ಲೆ. ನಿಮ್ಮ ಕಿತ್ತಾಟದಿಂದಾಗಿ ಜಿಲ್ಲೆಯಲ್ಲಿ ಪಕ್ಷ ಎರಡು ಭಾಗವಾಗುತ್ತಿದೆ. ಇದರಿಂದ ಕಾರ್ಯಕರ್ತರು ಗೊಂದಲಕ್ಕೆ ಸಿಲುಕಿದ್ದಾರೆ. ಚುನಾವಣೆ ಹತ್ತಿರ ಬರುತ್ತಿದ್ದು, ಭಿನ್ನಮತ ಮರೆತು ಒಟ್ಟಾಗಿ ಕೆಲಸ ಮಾಡುವಂತೆ’ ವೇಣುಗೋಪಾಲ್ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಸತೀಶ್ ಜಾರಕಿಹೊಳಿ ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರುತ್ತಾರೆ ಎಂಬ ಮಾಹಿತಿಗಳು ಹರಿದಾಡುತ್ತಿರುವ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗಿದೆ. ಪಕ್ಷ ಬಿಡುವ ನಿರ್ಧಾರ ತೆಗೆದುಕೊಳ್ಳುವುದು ಬೇಡ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಹೋಗುತ್ತದೆ ಎಂದು ಎಲ್ಲ ಮುಖಂಡರು ಸತೀಶ್ ಜಾರಕಿಹೊಳಿ ಅವರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics