ಶಿವಮೊಗ್ಗ: ಎಚ್ ಡಿ ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಅವರ ರಾಜಕೀಯ ಪ್ರವೇಶ ಕುರಿತಂತೆ ಬಿಸಿ ಬಿಸಿ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರ ಸ್ವಾಮಿ ಅವರು ಪ್ರಜ್ವಲ್ ರೇವಣ್ಣಗೆ ಜೆಡಿಎಸ್ ನಿಂದ ಟಿಕೆಟ್ ನೀಡಲಾಗುವುದಿಲ್ಲ ಎಂದು ಹೇಳಿದ್ದಾರೆ.
ಕುಮಾರ ಪರ್ವ ಯಾತ್ರೆ ನಿಮಿತ್ತ ಗುರುವಾರ ಶಿವಮೊಗ್ಗ ನಗರಕ್ಕೆ ಆಗಮಿಸಿರುವ ಎಚ್ ಡಿ ಕುಮಾರ ಸ್ವಾಮಿ ಅವರು, ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ರಾಜಕೀಯ ಪ್ರವೇಶ ಕುರಿತ ಸುದ್ದಿಗಳನ್ನು ಅಲ್ಲಗಳೆದ ಕುಮಾರ ಸ್ವಾಮಿ ಅವರು, ಈ ಹಿಂದೆ ನಿರ್ಧರಿಸಿದಂತೆ ಕುಟುಂಬದಿಂದ ಇಬ್ಬರು ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ. ನಾನು ಮತ್ತು ರೇವಣ್ಣ ಸ್ಪರ್ಧೆ ಮಾಡುತ್ತಿರುವುದರಿಂದ ಪ್ರಜ್ವಲ್ ರೇವಣ್ಣಗೆ ಟಿಕೆಟ್ ನೀಡಲಾಗುವುದಿಲ್ಲ. ಪ್ರಜ್ವಲ್ ಸ್ಪರ್ಧೆಗೆ ಕುಟುಂಬದಿಂದಲೇ ಗ್ರೀನ್ ಸಿಗ್ನಲ್ ದೊರೆತಿಲ್ಲ ಎಂದು ಕುಮಾರ ಸ್ವಾಮಿ ಹೇಳಿದರು.
ಈ ಹಿಂದೆ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಾ, "ತನ್ನ ಮಗ ಪ್ರಜ್ವಲ್ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದು, ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಇನ್ನೂ ಖಚಿತವಾಗಿಲ್ಲ. ದೇವೇಗೌಡರಿಂದ ಗ್ರೀನ್‌ಸಿಗ್ನಲ್ ಸಿಗಬೇಕಾಗಿದೆ ಎಂದು ಹೇಳಿದ್ದರು. ಈ ಹೇಳಿಕೆ ತೀವ್ರ ಸುದ್ದಿಗೆ ಗ್ರಾಸವಾದ ಬೆನ್ನಲ್ಲೇ ಹೇಳಿಕೆ ನೀಡಿದ್ದ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ, "ರೇವಣ್ಣನ ಪುತ್ರ ಪ್ರಜ್ವಲ್ ಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಗ್ರೀನ್ ಇಲ್ಲವೇ ವೈಟ್ ಸಿಗ್ನಲ್ ನೀಡಲಾಗಿಲ್ಲ. ಪ್ರಜ್ವಲ್ ಹಾಗೂ ಕುಮಾರಸ್ವಾಮಿ ಪುತ್ರ ನಿಖಿಲ್ ರಾಜಕೀಯಕ್ಕೆ ಬರಬೇಕೇ, ಬೇಡವೇ ಎನ್ನುವುದನ್ನು ಜನರೇ ನಿರ್ಧರಿಸುತ್ತಾರೆ. ನಾನು ಪ್ರಧಾನಿಯಾಗುತ್ತೇನೆಂದು ಯೋಚಿಸಿಯೂ ಇರಲಿಲ್ಲ" ಎಂದು ಹೇಳಿದ್ದರು.