ಬೆಳಗಾವಿ: ಬೆಳಗಾವಿಯ ಸುವರ್ಣಸೌಧದಲ್ಲಿ ಸೋಮವಾರ ಆರಂಭಗೊಂಡ ಚಳಿಗಾಲದ ಅಧಿವೇಶನದಲ್ಲಿ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದ ಬಳಿಕ ವಿಧಾನಸಭೆ ಕಲಾಪವನ್ನು ಸ್ಪೀಕರ್ ಕೆಬಿ ಕೋಳಿವಾಡ ಅವರು ನಾಳೆ ಬೆಳಗ್ಗೆ 10.30ಕ್ಕೆ ಮುಂದೂಡಿದರು.
ಇಂದು ಬೆಳಗ್ಗೆ ಆರಂಭಗೊಂಡ 10 ದಿನಗಳ 8ನೇ ಚಳಿಗಾಲದ ಅಧಿವೇಶನದಲ್ಲಿ ಮಾಜಿ ಮುಖ್ಯಮಂತ್ರಿ ಎನ್. ಧರಂ ಸಿಂಗ್, ಪತ್ರಕರ್ತೆ ಗೌರಿ ಲಂಕೇಶ್ ಮತ್ತಿತರ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದ ಬಳಿ ಸ್ಪೀಕರ್ ಕೆ.ಬಿ.ಕೋಳಿವಾಡ್ ಅವರು ಕಲಾಪವನ್ನು ನಾಳೆಗೆ ಮುಂದೂಡಿದರು.
ಚಳಿಗಾಲದ ಅಧಿವೇಶನದ ಮೊದಲ ದಿನವೇ ಹೆಚ್ಚಿನ ಸಂಖ್ಯೆಯ ಶಾಸಕರು, ಸಚಿವರು ಗೈರುಹಾಜರಾಗಿದ್ದರು. ವಿಧಾನಸಭೆ ಕಲಾಪದಲ್ಲಿ ಕೇವಲ 53 ಶಾಸಕರು, ಬೆರಳೆಣಿಕೆಯಷ್ಟು ಸಚಿವರು ಮಾತ್ರ ಭಾಗವಹಿಸಿದ್ದರು.
ಪರಿಷತ್ ಕಲಾಪ ಮಧ್ಯಾಹ್ನ 3ಗಂಟೆಗೆ ಮುಂದೂಡಿಕೆ:
ಕಲಾಪದಲ್ಲಿ ಆಡಳಿತಾರೂಢ ಸರ್ಕಾರದ ಸಚಿವರು ಗೈರು ಹಾಜರಾಗಿದ್ದಕ್ಕೆ ವಿಪಕ್ಷ ನಾಯಕ ಕೆಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದರು. ಈ ಸಂದರ್ಭದಲ್ಲಿ ನಿಲುವಳಿ ಸೂಚನೆ ಮಂಡನೆಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರು ಪರಿಷತ್ ಬಾವಿಗಿಳಿದು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ, ಕೋಲಾಹಲದಿಂದಾಗಿ ಸಭಾಪತಿ ಡಿಎಚ್ ಶಂಕರಮೂರ್ತಿ ಅವರು ಕಲಾಪವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿದರು.