ಅಧಿವೇಶನಕ್ಕೆ ಸಜ್ಜಾಗಿರುವ ಸುವರ್ಣಸೌಧ
ಬೆಳಗಾವಿ: ಇಂದಿನಿಂದ ಬೆಳಗಾವಿಯ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಹರಿಹಾಯಲು ಪ್ರತಿಪಕ್ಷಗಳು ತಂತ್ರ ರೂಪಿಸಿವೆ. ಪ್ರತಿಪಕ್ಷ ಬಿಜೆಪಿ ಏಟಿಗೆ ಏದಿರೇಟು ನೀಡಲು ಆಡಳಿತ ಪಕ್ಷ ಕೂಡ ಸಜ್ಜಾಗಿದೆ.
ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣ, ಬಿಜೆಪಿ ಅವಧಿಯಲ್ಲಿ ವಿದ್ಯುತ್ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ, ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮತ್ತು ಅವರ ಆಪ್ತರ ಮನೆಗಳ ಮೇಲೆ ನಡೆದಿರುವ ಆದಾಯ ತೆರಿಗೆ ದಾಳಿ, ಟಿಪ್ಪು ಜಯಂತಿ ಆಚರಣೆ, ಗೌರಿ ಹತ್ಯೆ, ರೈತರ ಸಮಸ್ಯೆ ಹಾಗೂ ಬೆಂಗಳೂರಿನಲ್ಲಿ ಬಿದ್ದ ಭಾರಿ ಮಳೆಯಿಂದಾದ ಹಾನಿ... ಇವು ಕಾವೇರಿದ ಚರ್ಚೆಗೆ ಕಾರಣವಾಗಲಿವೆ.
ಇನ್ನೂ ಜೆಡಿಎಸ್ ರೈತರು ಮತ್ತು ಇತರೆ ಸಾರ್ವಜನಿಕರ ಸಮಸ್ಯೆ ಬಗ್ಗೆ ಗಮನ ಸೆಳೆಯು ಸಿದ್ಧತೆ ನಡೆಸುತ್ತಿದೆ.
ಕೇರಳದಲ್ಲಿ ನಡೆದ ಸೋಲಾರ್ ಹಗರಣದ ಆರೋಪಿಯಾಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಪ್ರಕರಣದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಲು ತಂತ್ರ ರೂಪಿಸಿದೆ. ವೇಣು ಗೋಪಾಲ್ ಅವರನ್ನು ರಾಜ್ಯ ಉಸ್ತುವಾರಿಯಿಂದ ವಾಪ್ ಕರೆಸಿಕೊಳ್ಳುವಂತೆ ಬೇಡಿಕೆ ಇಡಲಿದೆ.
ಇನ್ನೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಸಿದ್ದರಾಮಯ್ಯ ಸರ್ಕಾರದ ಹಲವು ಹಗರಣಗಳ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಲು ತಯಾರಿ ನಡೆಸಿದ್ದಾರೆ.
ಗಣಪತಿ ಪ್ರಕರಣವನ್ನು ತಣ್ಣಗೆ ಮಾಡಲು ಆಡಳಿತ ಪಕ್ಷ ಕಾಂಗ್ರೆಸ್ ಪ್ರತಿತಂತ್ರ ರೂಪಿಸಿದೆ. ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಇಂಧನ ಸಚಿವರಾಗಿದ್ದ ಶೋಭಾ ಕರಂದ್ಲಾಜೆ ಅವರ ಅವಧಿಯಲ್ಲಿ ನಡೆದಿದೆ ಎನ್ನಲಾದ ವಿದ್ಯುತ್ ಖರೀದಿ ಅವ್ಯವಹಾರ ಪ್ರಸ್ತಾಪಿಸಿ ಕೋಲಾಹಲ ಎಬ್ಬಿಸಲು ಕಾಂಗ್ರೆಸ್ ಸದಸ್ಯರು ಸಜ್ಜಾಗಿದ್ದಾರೆ. ವಿದ್ಯುತ್ ಖರೀದಿ ಅಕ್ರಮ ಕುರಿತು ಪರಿಶೀಲಿಸಿರುವ ಸದನ ಸಮಿತಿ ವರದಿಯನ್ನು ಇಂಧನ ಸಚಿವ ಡಿ.ಕೆ ಶಿವಕುಮಾರ್ ಅವರು ಮಂಡಿಸುವ ಸಾಧ್ಯತೆಯಿದೆ.
ಇದೆಲ್ಲಾವನ್ನು ಹೊರತು ಪಡಿಸಿ, ಮಾಜಿ ಉಪಮುಖ್ಯಮಂತ್ರಿ ಆರ್. ಆಶೋಕ್ ಬಗರ್ ಹುಕುಂ ಸಮಿತಿ ಅಧ್ಯಕ್ಷರಾಗಿದ್ದಾಗ ನಡೆದಿದೆ ಎನ್ನಲಾದ ಅವ್ಯವಹಾರ ಕುರಿತು ಉಭಯ ಸದನಗಳಲ್ಲಿ ಚರ್ಚೆ ಕಾವೇರುವ ಸಾಧ್ಯತೆಯಿದೆ.
15 ಸಂಘಟನೆಗಳಿಂದ ಸುವರ್ಣಸೌಧದ ಎದುರು ಪ್ರತಿಭಟನೆ
ಸುಮಾರು 15 ವಿವಿಧ ಸಂಘಟನೆಗಳು ಬೆಳಗಾವಿಯ ಸುವರ್ಣ ಸಂಘದ ಎದುರು ಪ್ರತಿಭಟನೆ ನಡೆಸಲು ಸಿದ್ಧವಾಗಿವೆ. ರೈತರು ಸಂಗೊಳ್ಳಿರಾಯಣ್ಣ ಅವರನ್ನು ಗಲ್ಲಿಗೇರಿಸಿದ ಸ್ಥಳದಿಂದ ಶನಿವಾರ ಪ್ರತಿಭಟನಾ ರ್ಯಾಲಿ ಆರಂಭಿಸಿದ್ದು ಇಂದು ಮಧ್ಯಾಹ್ನ ಸುವರ್ಣ ಸೌಧ ತಲುಪುವ ಸಾಧ್ಯತೆಯಿದೆ. ಖಾಸಗಿ ಆಸ್ಪತ್ರೆಗಳ ನಿಯಂತ್ರಣ ತಿದ್ದುಪಡಿ ಮಸೂದೆ ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ಶಾಖೆ ನೇತೃತ್ವದಲ್ಲಿ ವೈದ್ಯರು ‘ಬೆಳಗಾವಿ ಚಲೋ’ ನಡೆಸಲಿದ್ದಾರೆ. ಇದರ ಜೊತೆಗೆ ದಿನಗೂಲಿ ಕಾರ್ಮಿಕರು, ಹಾಗೂ ದಲಿತ ಸಂಘಟನೆಗಳು ಕೂಡ ಪ್ರತಿಭಟನೆಗೆ ನೋಂದಣಿ ಮಾಡಿಸಿವೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos