ರಾಜಕೀಯ

2018ರ ವಿಧಾನಸಭೆ ಚುನಾವಣೆ: ಡಿಸೆಂಬರ್ 15 ರಿಂದ ಸಿಎಂ 1 ತಿಂಗಳ ರಾಜ್ಯ ಪ್ರವಾಸ

Shilpa D
ಮೈಸೂರು: 2018ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕೆಂದು ಪಣ ತೊಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಡಿಸೆಂಬರ್ 15 ರಿಂದ 1 ತಿಂಗಳ ಕಾಲ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. 
ಮೊದಲ ಹಂತವಾಗಿ ರಾಜ್ಯದ ಎಲ್ಲಾ 224  ವಿಧಾನ ಸಭೆ ಕ್ಷೇತ್ರಗಳಿಗೂ ಭೇಟಿ ನೀಡಿ ಪಕ್ಷವನ್ನು ಸಜ್ಜುಗೊಳಿಸುವುದಾಗಿ ತಿಳಿಸಿದ್ದಾರೆ. ಜೊತೆಗೆ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸುವುದಾಗಿ ಹೇಳಿದ್ದಾರೆ. 
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಜನತೆ ನಮ್ಮ ಪರವಾಗಿದ್ದು, ಈ ಬಾರಿ ಚುನಾವಣೆಯಲ್ಲಿ ಸ್ಪಷ್ಟ ಜನಾದೇಶ ನಮ್ಮ ಪರವಾಗಿಯೇ ಇರುತ್ತದೆ.  ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದ್ದಾರೆ.
ಬಿಜೆಪಿ ಮಿಷನ್ 150 ಮಂತ್ರ ಜಪಿಸುತ್ತಲೇ ಇರಲಿ, ಕುಮಾರಸ್ವಾಮಿ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ ಎಂದು ಟೀಕಿಸಿದ ಸಿಎಂ ಸಿದ್ದರಾಮಯ್ಯ, ಜನವರಿ 1 ರಿಂದ ಎಲ್ಲಾ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭಗೊಳ್ಳಲಿವೆ ಎಂದು ತಿಳಿಸಿದರು.
2018ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಹೇಳಿರುವ ಸಿದ್ದರಾಮಯ್ಯ, ನಾನು ಈ ಚುನಾವಣೆಯಲ್ಲಿ  ಸ್ಪರ್ಧಿಸಬಾರದೆಂದು ನಿಶ್ಚಯಿಸಿದ್ದೆ, ಆದರೆ ಪಕ್ಷದ ಹೈಕಮಾಂಡ್ ಈ ಬಾರಿ ಚುನಾವಣೆಯಲ್ಲಿ ಕಣಕ್ಕಿಳಿಯಬೇಕೆಂದು ಸೂಚಿಸಿದೆ, ಅದಕ್ಕಾಗಿಯೇ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದು ಹೇಳಿದ ಅವರು, ಚಾಮುಂಡೇಶ್ವರಿ ಕ್ಷೇತ್ರದ ಜನರಿಗೆ ನನ್ನ ಮೇಲೆ ವಿಶೇಷ ಪ್ರೀತಿಯಿದೆ ಎಂದು ಭಾವುಕರಾದರು.
ಪ್ರಧಾನಿ ನರೇಂದ್ರ ಮೋದಿ ಅವರ ಮೋಡಿ ಮಾಡುವ ಮಾತು ಹಾಗೂ ಅಮಿತ್‌ ಷಾ ಅವರ ಗಿಮಿಕ್ ರಾಜ್ಯದಲ್ಲಿ ನಡೆಯುವುದಿಲ್ಲ ಎಂದು  ಸಿದ್ದರಾಮಯ್ಯ ಹೇಳಿದರು. ಗ್ರೆಸ್‌ ಸರ್ಕಾರದ ಬಗೆಗೆ ರಾಜ್ಯದ ಜನರು ಒಲವು ಇಟ್ಟುಕೊಂಡಿದ್ದಾರೆ. ಸರ್ಕಾರದ ಕಾರ್ಯಕ್ರಮಗಳು ಜನರನ್ನು ತಲುಪಿವೆ. ಮತದಾರರು ಮತ್ತೆ ನಮ್ಮ ಮೇಲೆ ವಿಶ್ವಾಸ ಇಡುತ್ತಾರೆ ಎಂಬ ಬಲವಾದ ನಂಬಿಕೆ ಇದೆ. ಷಾ ಅವರು ಮಂಗಳೂರಿಗೆ, ಮೈಸೂರಿಗೆ ಬರುವುದರಿಂದ ಮತದಾರರ ಮನಸು ಬದಲಾಗದು’ ಎಂದು ವಿವರಿಸಿದರು.
ಮನಮನೆಗೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಶಾಸಕರು ಸರಿಯಾಗಿ ಪಾಲ್ಗೊಳ್ಳದಿರುವುದಕ್ಕೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.ಈ ಸಂಬಂಧ ವ್ಯವಸ್ಥಿತ ರೀತಿಯಲ್ಲಿ ಕಾರ್ಯಕ್ರಮ ರೂಪಿಸುವುದಕ್ಕೆ ಶುಕ್ರವಾರ ಸಭೆ ಕರೆಯಲಾಗಿದೆ. 
SCROLL FOR NEXT