ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಸಿದ್ಧತೆ ಆರಂಭಿಸಿವೆ, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರ ಸ್ವಾಮಿ ಶಸ್ತ್ರ ಚಿಕಿತ್ಸೆಗೊಳಗಾಗಿ ವಿಶ್ರಾಂತಿ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಅವರ ಸ್ಥಾನವನ್ನು ತುಂಬಲು ಪುತ್ರ ಹಾಗೂ ನಟ ನಿಖಿಲ್ ಕುಮಾರ್ ಚುನಾವಣಾ ಪ್ರಚಾರದ ಸಾರಥ್ಯ ವಹಿಸಲಿದ್ದಾರೆ.
ನಿಖಿಲ್ ಕುಮಾರ್ ನವೆಂಬರ್ 1ರಿಂದ ಹಳೇಯ ಮೈಸೂರು ಭಾಗದಲ್ಲಿ ಪ್ರಚಾರ ಕಾರ್ಯ ಕೈಗೊಳ್ಳಲಿದ್ದಾರೆ, ಅಷ್ಟರೊಳಗೆ ತಾವು ಕೈಗೊಂಡಿರುವ ಸಿನಿಮಾ ಕಮಿಟ್ ಮೆಂಟ್ ಗಳನ್ನು ಪೂರೈಸಲಿದ್ದಾರೆ.
ಕುರುಕ್ಷೇತ್ರ ಸಿನಿಮಾದಲ್ಲಿ ನಟಿಸುತ್ತಿರುವ ನಿಖಿಲ್ ಆದಷ್ಟು ಶೀಘ್ರವೇ ಶೂಟಿಂಗ್ ಮುಗಿಸಲು ನಿರ್ಧರಿಸಿದ್ದಾರೆ. ಮುಂದಿನ ವಾರ ಮೈಸೂರಿನಲ್ಲಿ ನಡೆಯುವ ಸಭೆಯಲ್ಲಿ ಭಾಗವಹಿಸುವುದಾಗಿ ಹೇಳಿರುವ ನಿಖಿಲ್, ನಾನು ಶಾಸಕ ಅಥವಾ ಸಂಸದನಾಗಬೇಕೆಂಬ ಆಸೆಯಿಂದ ಪ್ರಚಾರದಲ್ಲಿ ಭಾಗವಹಿಸುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಜನತೆ ನನ್ನ ತಂದೆ ಕುಮಾರ ಸ್ವಾಮಿ ಅವರನ್ನ ಮಿಸ್ ಮಾಡಿಕೊಳ್ಳುತ್ತಿದ್ದಾರೆ, ಅವರು ಪ್ರಚಾರಕ್ಕೆ ಬರುವವರೆಗೂ ಅವರ ಸ್ಥಾನ ತುಂಬಲು ನಾನು ಭಾಗವಹಿಸುತ್ತಿದ್ದೇನೆ. ನನ್ನ ಮುಂದೆಯೂ ಕೆಲವು ಐಡಿಯಾಗಳಿವೆ, ಅದನ್ನು ಜಾರಿಗೆ ತರಲು ಹಾಗೂ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಇದು ಸರಿಯಾದ ಸಮಯ ಎಂದು ನನಗನ್ನಿಸುತ್ತಿದೆ, ಇದರ ಹಿಂದೆ ಯಾವ ಬೇರೆ ಉದ್ದೇಶವೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ತಮ್ಮ ತಂದೆ ಕುಮಾರ ಸ್ವಾಮಿ ಮುಖ್ಯಮಂತ್ರಿಯಾಗಿದ್ದ 20 ತಿಂಗಳ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮ ಹಾಗೂ ಜನಪ್ರಿಯ ಯೋಜನೆ ಹಾಗೂ ಸಾಧನೆಗಳ ಬಗ್ಗೆ ಜನರಿಗೆ ತಿಳಿಸಲಾಗುವುದು, ರಾಷ್ಟ್ರೀಯ ಪಕ್ಷಗಳ ವಿರುದ್ಧ ಸ್ಪರ್ಧಿಸಿ ಕಳೆದ 10 ವರ್ಷಗಳಿಂದ ಜೆಡಿಎಸ್ ವಿರೋಧ ಪಕ್ಷದಲ್ಲಿ ಕುಳಿತಿದೆ, ಹೀಗಾಗಿ ನನ್ನ ತಂದೆಯ ಮುಂದಿನ 5 ವರ್ಷಗಳ ಯೋಜನೆಗಳನ್ನು ಅನುಷ್ಠಾನಗೊಳಿಸಲು ನಮ್ಮ ಪಕ್ಷಕ್ಕೆ ಮತ ನೀಡುವಂತೆ ಜನರಿಗೆ ಕೇಳುವುದಾಗಿ ಹೇಳಿದ್ದಾರೆ.
ಮುಂದಿನ ಫೆಬ್ರವರಿಯಿಂದ ಏಪ್ರಿಲ್ ವರೆಗೂ ನಿಖಿಲ್ ಯಾವುದೇ ಸಿನಿಮಾ ಶೂಟಿಂಗ್ ನಲ್ಲಿ ಭಾಗವಹಿಸುವುದಿಲ್ಲ, ರಾಮನಗರ, ಮಂಡ್ಯ, ಮೈಸೂರು ಮತ್ತು ತುಮಕೂರು, ಚಿಕ್ಕಬಳ್ಳಾಪುರ ಹಾಗೂ ಮಡಿಕೇರಿಯಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ, ಹಾಗೆಯೇ ಇದೇ ವೇಳೆ ಕುಮಾರ ಸ್ವಾಮಿ ಉತ್ತರ ಕರ್ನಾಟಕ ಜಿಲ್ಲೆಗಳ ಕಡೆ ಗಮನ ವಹಿಸಲಿದ್ದಾರೆ.
ಇನ್ನೂ ಒಕ್ಕಲಿಗರ ಪ್ರಾಬಲ್ಯ ಹೆಚ್ಚಿರುವ ರಾಜ ರಾಜೇಶ್ವರಿ ನಗರದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧೆ ಬಹುತೇಕ ಖಚಿತವಾಗಿದೆ. ಪಕ್ಷದ ವಿರುದ್ಧ ಪ್ರಜ್ವಲ್ ಹೇಳಿಕೆ ಕೂಡ ಅವರಿಗೆ ವರವಾಗಿದೆ.
ಕುಮಾರ ಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದಾರೆ, ಹೀಗಾಗಿ ನಿಖಿಲ್ ಸ್ಪರ್ಧಿಸುವ ಸಾಧ್ಯತೆ ಕಡಿಮೆಯಿದ್ದು ಕೇವಲ ಪ್ರಚಾರ ಕಾರ್ಯಕ್ರಮದಲ್ಲಿ ಮಾತ್ರ ಭಾಗವಹಿಸಲಿದ್ದಾರೆ. ದೇವೇಗೌಡರ ಕುಟುಂಬದ ಎರಡನೇ ಹಂತದ ನಾಯಕತ್ವದ ಬಗ್ಗೆ ಏನೇ ಚರ್ಚೆ ನಡೆದಿದ್ದರೂ ಅಂತಿಮವಾಗಿ ಮತಗಳನ್ನು ಪಡೆಯುವುದೇ ಪ್ರಮುಖ ಉದ್ದೇಶವಾಗಿದೆ, ಭವಾನಿ ರೇವಣ್ಣ ಸೇರಿದಂತೆ ದೇವೇಗೌಡ ಕುಟುಂಬದ ಎಲ್ಲರು ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜೊತೆಗೆ ಇತ್ತೀಚೆಗೆ ಚುನಾವಣಾ ಪ್ರಚಾರಕ್ಕಾಗಿಯೇ ತಮಿಳು ನಾಡಿನಲ್ಲಿ ವಿಶೇಷ ಲಕ್ಷುರಿ ಬಸ್ ಒಂದನ್ನು ಸಿದ್ಧಪಡಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics