ಅಲಿ ಆಸ್ಕರ್ ರಸ್ತೆಯಲ್ಲಿರು ಗುಂಡಿಗಳು
ಬೆಂಗಳೂರು: ರಾಜ್ಯ ರಾಜಧಾನಿಯ ಕಳಪೆ ರಸ್ತೆಗಳ ಸಂಬಂಧ ವಿರೋಧ ಪಕ್ಷಗಳು ಮತ್ತು ನಾಗರಿಕರು ತೀವ್ರ ಆಕ್ರೋಶ ವ್ಯಕ್ತ ಪಡಿಸಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್, ರಾತ್ರೋರಾತ್ರಿ ಎಲ್ಲವನ್ನು ಸರಿಪಡಿಸುವಂತ ಯಾವುದೇ ಮಂತ್ರ ದಂಡವಿಲ್ಲ ಎಂದು ಹೇಳಿದ್ದಾರೆ. ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ರಸ್ತೆಗಳಿಗೆ ವೈಟ್ ಟಾಪಿಂಗ್ ಮಾಡಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.
ರಸ್ತೆ ಗಳನ್ನು ಸರಿಪಡಿಸಲು ಸಮರೋಪಾದಿಯಲ್ಲಿ ಕೆಲಸ ಆರಂಭವಾಗಿದೆ. ಕಳೆದ ಕೆಲವು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಭಾರೀ ಮಳೆ ಹಾಗೂ ವಿವಿಧ ಏಜೆನ್ಸಿಗಳು ರಸ್ತೆ ಅಗೆದಿರುವುದರಿಂದ ಗುಂಡಿಗಳು ಉಂಟಾಗಿವೆ, ಸಿಎಂ ಸಿದ್ದರಾಮಯ್ಯ ರಸ್ತೆ ಗುಂಡಿ ಮುಚ್ಚಲು 15 ಗಡುವು ನೀಡಿದ್ದಾರೆ ಎಂದು ಹೇಳಿದ್ದಾರೆ.
ಪ್ರ: ಬೆಂಗಳೂರು ರಸ್ತೆಗಳ ಕೆಟ್ಟ ಪರಿಸ್ಥಿತಿಗೆ ಕಾರಣ?
ಉ: ನಮಗೆ ಸಮಸ್ಯೆ ಬಗ್ಗೆ ಅರಿವಿದೆ, ಕೆಲವು ರಸ್ತೆಗಳಲ್ಲಿ ಗುಂಡಿಗಳು ಉಂಟಾಗಿವೆ. ಕಳೆದ 52 ದಿನಗಳಲ್ಲಿ 40 ದಿನ ಸತತವಾಗಿ ಮಳೆ ಸುರಿಯುತ್ತಿದೆ, ಹೊಸ ರಸ್ತೆಗಳಿಗೆ ಮಳೆಯಿಂದ ಹೆಚ್ಚಿನ ಹಾನಿಯಾಗಿಲ್ಲ, ಕೆರೆಗಳ ನೀರು ತುಂಬಿ ಹರಿಯುತ್ತಿದೆ. ಒಂದು ವೇಳೆ ಹೊಸ ರಸ್ತೆಗಳು ಹಾಳಾದರೆ ಗುತ್ತಿಗೆದಾರರು ಅವುಗಳನ್ನು ಸರಿಪಡಿಸುತ್ತಾರೆ. ವಿವಿಧ ಎಜೆನ್ಸಿಗಳು ರಸ್ತೆ ಅಗೆಯುವುದು ಬಹುದೊಡ್ಡ ಸಮಸ್ಯೆಯಾಗಿದೆ, ಎಷ್ಟು ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ. ಕೋಲ್ಡ್ ಮಿಕ್ಸ್ ಬಳಸಿ ಗುಂಡಿಗಳನ್ನು ಮುಚ್ಚಲಾಗುತ್ತಿದೆ. ಮಳೆ ನಿಲ್ಲುವವರೆಗೂ ಕಾಯಲು ಸಾಧ್ಯವಿಲ್ಲ, ಇದಕ್ಕಾಗಿ ಜನರಿಗೆ ಸಹಕರಿಸುವಂತೆ ಕೇಳಲಾಗಿದೆ.
ಪ್ರ: ರಸ್ತೆ ಗುಂಡಿಗಳಿಂದಾಗಿ ಮೂವರು ಸಾವನ್ನಪ್ಪಿದ್ದಾರಲ್ಲ?
ಉ: ರಸ್ತೆಗುಂಡಿಗಳು ಅಂದರೆ ಅರ್ಥ ಏನು? ನೀವು ರಸ್ತೆಯ ಮೇಲಿದ್ದಾಗ ಒಂದು ಬಸ್ ಅಥವಾ ಲಾರಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದರೇ ಅದು ರಸ್ತೆಗುಂಡಿಯ ತಪ್ಪೇ? ಮೈಸೂರು ರಸ್ತೆಯ ಮೇಲ್ಸೇತುವೆ ಮೇಲೆ ನಡೆದ ಅಪಘಾತ ಮತ್ತೊಂದು ರಸ್ತೆಗುಂಡಿಯಿಂದ ಆಗಿದೆ ಎಂದು ಹೇಗೆ ಹೇಳುತ್ತೀರಾ? ಇದು ವೇಗದ ರೈಡಿಂಗ್ ಅಥವಾ ನಿರ್ಲಕ್ಷ್ಯದ ರೈಡಿಂಗ್ ನಿಂದ ಕೂಡ ಆಗಿರಬಹುದು ಅಲ್ಲವೇ, ಹಾಗೆಂದ ಮಾತ್ರಕ್ಕೆ ಜನರ ರಕ್ಷಣೆ ಬಗ್ಗೆ ನನಗೆ ಗಮನ ವಿಲ್ಲವೆಂದಲ್ಲ, ಎಲ್ಲದಕ್ಕೂ ರಸ್ತೆಗುಂಡಿಗಳೇ ಕಾರಣ ಎಂದು ಹೇಳಲಾಗುವುದಿಲ್ಲ.
ಪ್ರ: ಗುತ್ತಿಗೆದಾರರು ಮತ್ತು ಎಂಜನೀಯರ್ಸ್ ಹೊಣೆಗಾರರನ್ನಾಗಿಸುತ್ತೀರಾ?
ಉ: ಬಿಬಿಎಂಪಿಯಲ್ಲಿ ಕೆಲಸ ಮಾಡುವ ಎಲ್ಲಾ ಗುತ್ತಿಗೆದಾರರನ್ನು ಸಭೆ ಕರೆದಿದ್ದೇವೆ, ಆದಷ್ಟು ಶೀಘ್ರವೇ ಎಲ್ಲಾ ರಸ್ತೆಗುಂಡಿಗಳನ್ನು ಮುಚ್ಚುವಂತೆ ಆದೇಶ ನೀಡಲಾಗಿದೆ. ಉತ್ತಮ ಗುಣಮಟ್ಟದ ಕೆಲಸಕ್ಕಾಗಿ ಎಂಜಿನೀಯರ್ ಗಳಿಗೆ ಜವಬ್ದಾರಿ ನೀಡಲಾಗಿದೆ.
ಪ್ರ: ಮಳೆಯಾದಾಗಲೆಲ್ಲಾ ಎಚ್.ಎಸ್ ಆರ್ ಲೇಔಟ್ ನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುತ್ತದೆ, ಇದಕ್ಕೆ ಅಗತ್ಯ ಕ್ರಮ ಕೈಗೊಂಡಿದ್ದೀರಾ?
ಉ: ಸ್ಟಾರ್ಮ್ ವಾಟರ್ ಡ್ರೈನೇಜ್ 7 ಸೆಂಮೀ ನೀರು ಹ್ಯಾಂಡಲ್ ಮಾಡುವಷ್ಟಿದೆ, ಅದನ್ನು 18 ಸೆಂಮೀ ಗೆ ಏರಿಸುತ್ತೇವೆ, ಸ್ವಾಭಾವಿಕವಾಗಿ ಚರಂಡಿಗಳು ತುಂಬಿಹರಿಯುತ್ತದೆ.
ಪ್ರ: ಪರಿಸ್ಥಿತಿ ನಿಭಾಯಿಸಲು ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬಿಜೆಪಿ ಹೇಳುತ್ತಿದೆಯಲ್ಲ?
ಉ: ಬೆಂಗಳೂರಿನ ಇಂದಿನ ಪರಿಸ್ಥಿತಿಗೆ ಬಿಜೆಪಿಯೇ ಕಾರಣ, ಅವರು ಅಧಿಕಾರದಲ್ಲಿದ್ದಾಗ, ಅವರು ಯಾವುದೇ ಅಭಿವೃದ್ದಿ ಕೆಲಸ ಮಾಡಿಲ್ಲ, ಈಗ ನಮ್ಮ ವಿರುದ್ಧವೇ ಆರೋಪ ಮಾಡುತ್ತಿದ್ದಾರೆ, 2008 ರಲ್ಲಿ ಬಿಜೆಪಿ -ಜೆಡಿಎಸ್ ಮೈತ್ರಿ ಸರ್ಕಾರವಿದ್ದಾಗ, ಬೆಂಗಳೂರನ್ನು ಲೂಟಿ ಮಾಡಿದ್ದಾರೆ, ವಿವಿಧ ಏಜೆನ್ಸಿಗಳಿಂದ 8 ,ಸಾವಿರ ಕೋಟಿ ರು ಸಾಲ ಪಡೆದಿದ್ದಾರೆ, ಆ ಹಣ ಎಲ್ಲಿ ಹೋಯಿತು. ಗುತ್ತಿಗೆದಾರರ 2,500 ಕೋಟಿ ರು. ಬಿಲ್ ಕೂಡ ಪಾವತಿಸಿಲ್ಲ, ಬಿಬಿಎಂಪಿ ಇನ್ನೂ ಆ ಬಿಲ್ ಕ್ಲಿಯರ್ ಮಾಡುತ್ತಿದೆ, ಈ ಕಾರಣಕ್ಕಾಗಿಯೇ ಗುತ್ತಿಗೆದಾರರು ಕೆಲಸ ಮಾಡಲು ಮುಂದೆ ಬರುತ್ತಿಲ್ಲ.
ಪ್ರ: ಪರಿಸ್ಥಿತಿ ಸುಧಾರಿಸಲು ಯಾವ ರೀತಿಯ ದೀರ್ಘಾವದಿಯ ಯೋಜನೆ ಕೈಗೊಂಡಿದ್ದೀರಾ?
ಉ: ನಾವು ಅನೇಕ ದೀರ್ಘಾವದಿಯ ಯೋಜನೆಗಳನ್ನು ಕೈಗೊಂಡಿದ್ದೇವೆ. 95 ಕೀಮೀ ರಸ್ತೆಗಳಲ್ಲಿ ಪ್ರಮುಖ 20 ಕಿಮೀ ರಸ್ತೆಗೆ ಟೆಂಡರ್ ಶ್ಯೂರ್ ಅಡಿಯಲ್ಲಿ ವೈಟ್ ಟಾಪಿಂಗ್ ಮಾಡಲು ನಿರ್ಧರಿಸಲಾಗಿದೆ. ಮಾರ್ಚ್ 2018ರ ವೇಳೆಗೆ ಈ ರಸ್ತೆಗಳು ಪೂರ್ಣಗೊಳ್ಳುತ್ತವೆ, ರಾತ್ರೋ ರಾತ್ರಿ ಎಲ್ಲವನ್ನು ಸರಿಪಡಿಸಲು ನಮ್ಮ ಬಳಿ ಯಾವುದೇ ಮಂತ್ರದಂಡವಿಲ್ಲ. ಶೀಘ್ರವೇ ಫಲಿತಾಂಶ ದೊರೆಯಲಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos