ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಜಿ, ಪರಮೇಶ್ವರ್ 7 ವರ್ಷ ಪೂರೈಸಿದ್ದಾರೆ, 2013 ರಲ್ಲಿ ಕಾಂಗ್ರೆಸ್ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಪಡೆದು ಅಧಿಕಾರದ ಗದ್ದುಗೆ ಏರಿದೆ ಪರಮೇಶ್ವರ್ ಎಕ್ಸ್ ಪ್ರೆಸ್ ಸಂದರ್ಶನ ನೀಡಿದ್ದಾರೆ.
ಪ್ರ: 2013ಕ್ಕೆ ಹೋಲಿಸಿದರೇ ಇಂದು ಕಾಂಗ್ರೆಸ್ ಪರಿಸ್ಥಿತಿ ಹೇಗಿದೆ?
ಉ: 2013 ಕ್ಕಿಂತ ಇಂದು ಕಾಂಗ್ರೆಸ್ ಪಕ್ಷ ಉತ್ತಮ ಸ್ಥಿತಿಯಲ್ಲಿದೆ, 2013ರ ಚುನಾವಣೆ ವೇಳೆ ನೀಡಿದ್ದ ಭರವಸೆಗಳಂತೆ ನಾವು ಎಲ್ಲವನ್ನು ಈಡೇರಿಸಿದ್ದೇವೆ, ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುತ್ತಿದ್ದೇವೆ. ಉತ್ತಮ ಸರ್ಕಾರದ ಆಶ್ವಾಸನೆ ನೀಡಿದ್ದೆವು, ಅದರಂತೆ ನಡೆದುಕೊಳ್ಳುತ್ತಿದ್ದೇವೆ, ಹಲವು ಆರೋಪಗಳು ಕೇಳಿ ಬಂದಿರಬಹುದು, ಆದರೆ ಯಾವುದೇ ಹಗರಣಗಳಲ್ಲಿ ಭಾಗಿಯಾಗಿಲ್ಲ.
ಕರ್ನಾಟಕದಲ್ಲಿ ನಾವು ಪ್ರಬಲರಾಗಿದ್ದೇವೆ, ಒಬ್ಬ ಅಧ್ಯಕ್ಷನಾಗಿ ನಾನು ತಳಮಟ್ಟದಿಂದ ಪಕ್ಷವನ್ನು ಸಂಘಟಿಸಿದ್ದೇನೆ, ಸರ್ಕಾರದ ಹಲವು ಯೋಜನೆಗಳನನ್ನು ಜನರಿಗೆ ತಲುಪಿಸಿದ್ದೇವೆ, ಸುಮಾರು 4.5 ಕೋಟಿ ಫಲಾನುಭವಿಗಳು ಸರ್ಕಾರದ ಯೋಜನೆಗಳ ಉಪಯೋಗ ಪಡೆದುಕೊಂಡಿದ್ದಾರೆ. ನಾವು ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದ್ದೇವೆ. ರಾಜ್ಯ ಮಟ್ಟದಲ್ಲಿ ಬೂತ್ ಕಮಿಟಿ ರಚಿಸಿದ್ದೇವೆ, ಪಕ್ಷದ ಯಾವುದೇ ಹಿರಿಯ ನಾಯಕರು ಬೂತ್ ಮಟ್ಟದ ಕಾರ್ಯಕರ್ತರನ್ನು ಸಂಪರ್ಕಿಸಬಹುದು.
ಪ್ರ: ಚುನಾವಣೆ ವೇಳೆ ಮೋದಿ ಬ್ರಾಂಡ್ ಬಳಸಲು ಬಿಜೆಪಿ ತಂತ್ರ ರೂಪಿಸಿದೆ?
ಉ:2018ರ ಚುನಾವಣೆಯಲ್ಲಿ ಬ್ರಾಂಡ್ ಮೋದಿ ಕೆಲಸ ಮಾಡುವುದಿಲ್ಲ, ದೇಶಕ್ಕೆ ಉತ್ತಮ ಆಡಳಿತ ನೀಡುವಲ್ಲಿ ಮೋದಿ ವಿಫಲರಾಗಿದ್ದಾರೆ, ದೇಶದ ಆರ್ಥಿಕ ವ್ಯವಸ್ಥೆ ಹದಗೆಟ್ಟು ಹೋಗಿದೆ. ತಾವು ನೀಡಿದ್ದ ಭರವಸೆಗಳನ್ನು ಮೋದಿ ಈಡೇರಿಸಿಲ್ಲ, ನಾವು ಮೋದಿಯ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ, ಮೋದಿ ಬರಲಿ ಹೋಗಲಿ, ಕರ್ನಾಟಕ ರಾಜಕೀಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
ಪ್ರ:ಕಾಂಗ್ರೆಸ್ ವಿರುದ್ದ ಆಡಳಿತ ವಿರೋಧಿ ಅಲೆ ಕೆಲಸ ಮಾಡಬಹುದೇ?
ಉ: ರಾಜ್ಯದಲ್ಲಿ ಎಲ್ಲಿಯೂ ಆಡಳಿತ ವಿರೋಧಿ ಅಲೆಯಿಲ್ಲ, ನಾವು ಯಾವುದೇ ವಲಯದಲ್ಲೂ ವೈಫಲ್ಯ ತೋರಿಲ್ಲ,ಕೆಲವು ಶಾಸಕರು ಅವರವರ ಕ್ಷೇತ್ರಗಳಲ್ಲಿ ಸರ್ಕಾರದ ಸಾಧನೆಗಳ ಬಗ್ದೆ ಜನರಿಗೆ ತಲುಪಿಸಿಲ್ಲ ಎನಿಸುತ್ತಿದೆ.
ಪ್ರ: ಅಭ್ಯರ್ಥಿಗಳ ಆಯ್ಕೆ ಸಂಬಂಧ ಪಕ್ಷ ಏನು ತಂತ್ರಗಾರಿಕೆ ರೂಪಿಸಿದೆ?
ಉ: ನಮ್ಮ ತಂತ್ರಗಾರಿಕೆ ಸ್ಪಷ್ಟವಾಗಿದೆ, ಬೇಕಾದರೆ ನಾಳೆಯೇ ನಾವು 100 ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಬಹುದು, ಬಿಜೆಪಿಯವರಿಂದ ಇದನ್ನು ಮಾಡಲು ಸಾಧ್ಯವೇ? ಸಚಿವರು ಹಾಗೂ ಶಾಸಕರ ಎಲ್ಲಾ ಕೆಲಸಗಳ ಮೇಲೆ ನಾವು ನಿರಂತರವಾಗಿ ನಿಗಾ ವಹಿಸಿದ್ದೇವೆ, ಗೆಲ್ಲುವ ಅಭ್ಯರ್ಥಿ ಯಾರು ಎಂಬುದು ನಮಗೆ ತಿಳಿದಿದೆ. ನಾನು ಮತ್ತು ಸಿಎಂ ಜೊತೆಯಾಗಿ ಕುಳಿತು ನಾಳೆಯೇ ಬೇಕಾದರೆ 100 ಅಭ್ಯರ್ಥಿಗಳ ಪಟ್ಟಿ ಘೋಷಿಸುತ್ತೇವೆ.
ಪ್ರ: ಮುಂದಿನ ಚುನಾವಣೆ ಸಿದ್ದರಾಮಯ್ಯ ನೇತೃತ್ವದಲ್ಲಿ, ಅಂದರೆ ಸಿದ್ದರಾಮಯ್ಯ ಅವರೇ ಮುಂದಿನ ಸಿಎಂ ಎಂದು ಅರ್ಥವೇ?
ಉ: ಚುನಾವಣೆಯಲ್ಲಿ ಪಕ್ಷ ಬಹುಮತ ಪಡೆದ ನಂತರವಷ್ಟೇ ಸಿಎಲ್ ಪಿಯಲ್ಲಿ ಸಿಎಂ ಅಭ್ಯರ್ಥಿ ಆಯ್ಕೆ ನಡೆಯುತ್ತದೆ. ಹೈಕಮಾಂಡ್ ಕೂಡ ವೀಕ್ಷಕರನ್ನು ಕಳುಹಿಸಲಿದೆ. ಶಾಸಕರ ಅಭಿಪ್ರಾಯ ಪಡೆದುಕೊಂಡು ಮುಂದಿನ ಸಿಎಂ ಯಾರು ಎಂಬುದನ್ನು ನಿರ್ದರಿಸಲಾಗುತ್ತದೆ. ಸಿಎಲ್ ಪಿ ಮುಖಂಡರಾಗಿ ಸಿದ್ದರಾಮಯ್ಯ ಮತ್ತೆ ಆಯ್ಕೆಯಾಗುವುದನ್ನು ಪಕ್ಷ ಒಪ್ಪಿಕೊಂಡರೇ ನಾನು ಕೂಡ ಒಪ್ಪಿಕೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ.
ನೀವೂ ಕೂಡ ಸಿಎಂ ಹುದ್ದೆಗೆ ಸ್ಪರ್ಧಿಸಲಿದ್ದೀರಾ?
ನನಗೆ ಸಿಎಂ ಆಗುವ ಎಲ್ಲಾ ಗುಣಗಳಿವೆ, ಆದರೆ ನಾನು ಸ್ಪರ್ಧಿಯಲ್ಲ, ನಾನು ಕೂಡ ಸಿಎಂ ಅಭ್ಯರ್ಥಿ ಎಂದು ನಾನು ಹೇಳಲಾರೆ,. ಮೊದಲು ಬಹುಮತ ದೊರಕಲಿ, ಅದರ ಕಡೆಯಷ್ಟೇ ನಮ್ಮ ಗಮನ.
ಪ್ರ; ಮಲ್ಲಿಕಾರ್ಜುನ ಖರ್ಗೆ ರಾಜ್ಯ ರಾಜಕೀಯಕ್ಕೆ ಮತ್ತೆ ವಾಪಸಾದರೇ ಪಕ್ಷಕ್ಕೆ ಲಾಭವಾಗುತ್ತದೆಯೇ?
ಪ್ರ: ಖರ್ಗೆ ಅವರು ಯಾವತ್ತೂ ರಾಜ್ಯ ರಾಜಕಾರವನ್ನು ಬಿಟ್ಟು ದೂರ ಹೋಗಿಲ್ಲ, ಎಲ್ಲಾ ಸಭೆ ಸಮಾರಂಭಗಳಲ್ಲೂ ಭಾಗಿಯಾಗುತ್ತಾರೆ. ಹಲವು ಸಂದರ್ಭಗಳಲ್ಲಿ ನಾನು ಅವರ ಮಾರ್ಗದರ್ಶನ ಪಡೆದಿದ್ದೇನೆ.
ಪ್ರ: ಸಿದ್ದರಾಮಯ್ಯ ಸರ್ಕಾರದ ಸಾಧನೆಗಳನ್ನು ಹೊರತುಪಡಿಸಿ, ಜನರಿಗೆ ತಿಳಿಸಲು ಬೇರೆ ಯಾವ ಸಾಧನೆಗಳಿವೆ?
ಉ: ಸಾಮಾಜಿಕ ನ್ಯಾಯ, ಅಭಿವೃದ್ಧಿ ಆರ್ಥಿಕ ಅಭಿವೃದ್ಧಿ, ಸೇರಿದಂತೆ ಎಲ್ಲಾ ವಲಯಗಳಲ್ಲಿ ನಾವು ಪ್ರಗತಿ ಸಾಧಿಸಿದ್ದೇವೆ, ಪ್ರತಿ ವರ್ಷ ಸುಮಾರು 35 ಸಾವಿರ ಮಂದಿಗೆ ಉದ್ಯೋಗ ನೀಡುತ್ತಿದ್ದೇವೆ.
ಪ್ರ: ಬೆಂಗಳೂರು ವಿಷಯದಲ್ಲಿ ನಿಮ್ಮ ಪಕ್ಷ ಸೋತಿದೆಯಲ್ಲವೇ?
ಉ: ಅದು ಸರಿಯಲ್ಲ, ರಸ್ತೆ ಮತ್ತು ಹಲವು ಮೂಲಭೂತ ಸೌಕರ್ಯ ಒದಗಿಸಲು ಸರ್ಕಾರ ಹಲವು ಕಾರ್ಯಕ್ರಮಗಳನ್ನು ಕೈಗೊಂಡಿದೆ. ಪ್ರಪಂಚದಲ್ಲೇ ಬೆಂಗಳೂರು ಡೈನಾಮಿಕ್ ಸಿಟಿ ಎಂದು ಪ್ರಸಿದ್ದಿ ಪಡೆದಿದೆ. ಸರ್ಕಾರ ನಗರಕ್ಕೆ ಬೇಕಾಗಿರುವ ಎಲ್ಲಾ ರೀತಿಯ ಸೌಕರ್ಯಗಳನ್ನು ಒದಗಿಸುತ್ತಿದೆ.
ಆದಾಯ ತೆರಿಗೆ ದಾಳಿಯ ಬಗ್ಗೆ ನಮಗೆ ತಕರಾರಿಲ್ಲ, ನಮ್ಮ ಅಭಿವೃದ್ಧಿ ಕೆಲಸಗಳನ್ನು ನೋಡಿ ಅದಕ್ಕೆ ಅಡ್ಡಿಗಾಲು ಹಾಕುತ್ತಿದೆ, ಬಿಜೆಪಿ ಒಂದು ರಾಜಕೀಯ ಪಕ್ಷ, ಅವರು ರಾಜಕೀಯ ಮಾಡಿಲಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics