ಬೆಂಗಳೂರು: ಸದಾ ತಮ್ಮ ಮೃದು ಮಾತಿನಿಂದಲೇ ಯಾರೊಬ್ಬರ ವಿರೋಧ ಕಟ್ಟಿಕೊಳ್ಳದ ನೂತನ ಗೃಹ ಸಚಿವ ರಾಮಲಿಂಗಾ ರೆಡ್ಡಿ ತಾವು ಪ್ರಯಾಣಿಸುವಾಗ ಶೂನ್ಯ ಸಂಚಾರ ಸೌಲಭ್ಯ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ವಿವಿಐಪಿ ಸಂಸ್ಕೃತಿಯನ್ನು ವಿರೋಧಿಸರುವ ರಾಮಲಿಂಗಾ ರೆಡ್ಡಿಗೆ ಗೃಹಖಾತೆ ನೀಡಲಾಗಿದೆ, ಮುಖ್ಯಮಂತ್ರಿ ಮತ್ತು ಗೃಹ ಸಚಿವರ ಸಂಚಾರದ ವೇಳೆ ಶೂನ್ಯ ಸಂಚಾರ ದಟ್ಟಣೆ ಸೌಲಭ್ಯ ನೀಡಲಾಗಿದೆ, ಆದರೆ ನಾನು ಇದನ್ನು ಬಳಸುವುದಿಲ್ಲ, ಇದರಿಂದ ಜನರು ನನಗೆ ಶಾಪ ಹಾಕುತ್ತಾರೆ ಎಂದು ರೆಡ್ಡಿ ತಿಳಿಸಿದ್ದಾರೆ.
ಬೆಂಗಳೂರಿನಂತ ನಗರದಲ್ಲಿ ಜನತೆ ಪ್ರತಿದಿನ ಟ್ರಾಫಿಕ್ ನಲ್ಲಿ ಸಿಲುಕಿಕೊಳ್ಳುತ್ತಾರೆ, ಎಲ್ಲರನ್ನು ನಿಲ್ಲಿಸಿ ನಾನು ವಿಶೇಷವಾಗಿ ಸಂಚರಿಸುವುದು ಸರಿ ಕಾಣುವುದಿಲ್ಲ, ನಾನು ಹಲವಾರು ಕಾರ್ಯಕ್ರಮಗಳಿಗೆ ಹಾಜರಾಗುತ್ತೇನೆ, ಅದರಲ್ಲಿ ಕೆಲವು ವಯಕ್ತಿಕ ಹಾಗೂ ಕೆಲವು ಸರ್ಕಾರಿ ಕಾರ್ಯಕ್ರಮಗಳಿರುತ್ತವೆ, ನಾನು ಎಲ್ಲೆಲ್ಲಿಗೆ ತೆರಳುತ್ತೇನೋ ಅಲ್ಲೆಲ್ಲಾ ಜನರ ಸಂಚಾರಕ್ಕೆ ಅಡ್ಡಿ ಪಡಿಸಿದರೇ ನಾಗರಿಕರು ನನಗೆ ಹಿಡಿ ಶಾಪ ಹಾಕುತ್ತಾರೆ ಎಂದು ತಿಳಿಸಿದ್ದಾರೆ.
ಇನ್ನೂ ಸಿಎಂ ಸಿದ್ದರಾಮಯ್ಯ ಅವರು ಈ ಸೌಲಭ್ಯವನ್ನು ಬಳಸಿಕೊಳ್ಳುತ್ತಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮುಖ್ಯಮಂತ್ರಿಗಳಿಗೆ ಹಲವಾರು ಕಾರ್ಯಕ್ರಮಗಳಿರುತ್ತವೆ. ಒಂದು ದಿನದಲ್ಲಿ ಹಲವು ಪ್ರದೇಶಗಳಿಗೆ ತೆರಳಬೇಕಿರುತ್ತದೆ, ಹೀಗಾಗಿ ಅವರಿಗೆ ಇದರ ಅಗತ್ಯ ಇರುತ್ತದೆ. ವಯಕ್ತಿಕವಾಗಿ ನನಗೆ ಈ ಸೌಲಭ್ಯ ಬೇಕಿಲ್ಲ ಎಂದು ಪ್ರತಿ ಪಾದಿಸಿದ್ದಾರೆ.
ಈ ಹಿಂದೆ ಪರಮೇಶ್ವರ್ ಗೃಹ ಮಂತ್ರಿಯಾಗಿದ್ದಾಗ ಈ ಸೌಲಭ್ಯ ಬಳಸುತ್ತಿದ್ದರು. ಶೂನ್ಯ ಸಂಚಾರಕ್ಕಾಗಿ ಆಂಬುನೆಲ್ಸ್ ಗಳನ್ನು ತಡೆ ಹಿಡಿಯದಂತೆ ಸಿಎಂ ಸಿದ್ದರಾಮಯ್ಯ ಆ ಹಿಂದೆ ಸಂಚಾರಿ ಪೊಲೀಸರಿಗೆ ತಾಕೀತು ಮಾಡಿದ್ದಾರೆ. ಜೊತೆಗೆ ತುರ್ತು ಸೇವೆಗಳಿಗೆ ಅಡ್ಡಿಯಾಗದಂತೆ ಕೆಲಸ ನಿರ್ವಹಿಸಬೇಕೆಂದು ಕೂಡ ಸಿಎಂ ಸಲಹೆ ನೀಡಿದ್ದಾರೆ.
ಇನ್ನೂ ಯಾವುದೇ ಪೊಲೀಸ್ ವಾಹನಗಳು ತಮಗೆ ಬೇಡ, ನಾನು ಇಲಾಖೆಯ ಅಧಿಕಾರಿಗಳಿಗೆ ಇದನ್ನು ಸ್ಪಷ್ಟಪಡಿಸಿದ್ದೇನೆ, ನನಗೆ ಯಾವುದೇ ಹೆಚ್ಚುವರಿ ಭದ್ರತೆ ಅಥವಾ ಗನ್ ಮ್ಯಾನ್ ಗಳ ಅವಶ್ಯಕತೆಯಿಲ್ಲ , ಕೇವಲ ಒಂದು ಹೆಚ್ಚುವರಿ ವಾಹನ ಸಾಕು ಎಂದು ತಿಳಿಸಿರುವುದಾಗಿ ಅವರು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos