ಬೆಂಗಳೂರು: ಕಳೆದ ಮಂಗಳವಾರ ರಾತ್ರಿ ಹತ್ಯೆಯಾದ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರಿಗೆ ಬೆದರಿಕೆ ಇದ್ದರೂ ಕರ್ನಾಟಕ ಸರ್ಕಾರ ಏಕೆ ಸೂಕ್ತ ಭದ್ರತೆ ನೀಡಲಿಲ್ಲ ಎಂದು ಪ್ರಶ್ನಿಸಿದ್ದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ಶುಕ್ರವಾರ ತಿರುಗೇಟು ನೀಡಿದ್ದಾರೆ.
ರವಿಶಂಕರ್ ಪ್ರಸಾದ್ ಅವರಿಗೆ ಹತ್ಯೆಯಾದ ಪತ್ರಕರ್ತೆಯ ಬಗ್ಗೆ ಮಾಹಿತಿ ಇಲ್ಲ. ಗೌರಿ ಲಂಕೇಶ್ ಅವರು ಯಾವತ್ತೂ ಭದ್ರತೆ ಕೇಳಿರಲಿಲ್ಲ ಎಂದು ರಾಮಲಿಂಗಾ ರೆಡ್ಡಿ ಅವರು ಪಿಟಿಐಗೆ ತಿಳಿಸಿದ್ದಾರೆ.
ಗೌರಿ ಲಂಕೇಶ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಡಿಜಿಪಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿದಾಗ ಭದ್ರತೆ ಒದಗಿಸುವಂತೆ ಕೇಳಿಕೊಂಡಿಲ್ಲ. ಒಂದು ವೇಳೆ ಅವರು ಭದ್ರತೆ ಕೇಳಿದ್ದರೆ ನಾವು ಖಂಡಿತ ನೀಡುತ್ತಿದ್ದೇವೆ. ಭದ್ರತೆ ಕೇಳಿದರೆ ಯಾವುದೇ ಸರ್ಕಾರ ಅದನ್ನು ನಿರಾಕರಿಸುವುದಿಲ್ಲ ಎಂದಿದ್ದಾರೆ.
ಗೌರಿ ಲಂಕೇಶ್ ಹತ್ಯೆಯ ನಂತರ ಭದ್ರತೆ ಕೇಳದಿದ್ದರೂ ಕೆಲವು ಬುದ್ಧಿಜೀವಿಗಳಿಗೆ ಭದ್ರತೆ ಒದಗಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.
ಇಂದು ಬೆಳಗ್ಗೆ ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದ ರವಿಶಂಕರ್ ಪ್ರಸಾದ್ ಅವರು, ಗೌರಿ ಲಂಕೇಶ್ ಅವರಿಗೆ ಸೂಕ್ತ ರಕ್ಷಣೆ ನೀಡುವಲ್ಲಿ ರಾಜ್ಯ ಸರ್ಕಾರದ ವಿಫಲವಾಗಿದೆ. ನಕ್ಸಲರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಗೌರಿ ಪ್ರಯತ್ನಿಸುತ್ತಿದ್ದರು ಎಂದು ಅವರ ಸಹೋದರ ಇಂದ್ರಜಿತ್ ಲಂಕೇಶ್ ನೀಡಿರುವ ಹೇಳಿಕೆಯ ವರದಿಗಳನ್ನು ಗಮನಿಸಿದರೆ, ನಕ್ಸಲರಲ್ಲೂ ಗೌರಿ ಅವರ ಕಾರ್ಯದ ಕುರಿತು ವಿರೋಧವಿತ್ತು ಎನ್ನಲಾಗಿದೆ. ಈ ಕುರಿತು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ತಿಳಿದಿದ್ದರೂ ಸೂಕ್ತ ಭದ್ರತೆಯನ್ನು ಏಕೆ ಒದಗಿಸಲಿಲ್ಲ?’ಎಂದು ಪ್ರಶ್ನಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics