ರಾಜಕೀಯ

ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಕೇಸ್: ಜಾರ್ಜ್ ರಾಜಿನಾಮೆಗೆ ಆಗ್ರಹಿಸಿ ಸೆ.16 ರಂದು ಬಿಜೆಪಿ ಪ್ರತಿಭಟನೆ

Shilpa D
ಬೆಂಗಳೂರು: ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸುಪ್ರೀಂಕೋರ್ಟ್‌ ಸಿಬಿಐಗೆ ಒಪ್ಪಿಸಿರುವುದರಿಂದ ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಸೆಪ್ಟಂಬರ್  16ರಂದು ರಾಜ್ಯಾದ್ಯಂತ ಬಿಜೆ‍‍ಪಿ ಪ್ರತಿಭಟನೆ ನಡೆಸಲಿದೆ.
ಸಿಐಡಿ ತನಿಖೆ ಸರಿಯಾಗಿ ನಡೆದಿಲ್ಲ. ಸಾಕ್ಷ್ಯಗಳು ಮತ್ತು ದಾಖಲೆಗಳನ್ನು ನಾಶ ಮಾಡಲಾಗಿದೆ. ಸುಪ್ರೀಂ ಕೋರ್ಟ್‌ ಆದೇಶ ನೀಡಿದ ಬಳಿಕವೂ
ಸಾಕ್ಷ್ಯ ತಿರುಚುವ ಕೆಲಸ ಮುಂದುವರಿದಿದೆ. ಜಾರ್ಜ್‌ ಮತ್ತು ಅಧಿಕಾರಿಗಳನ್ನು ರಕ್ಷಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಪ್ರಕರಣವನ್ನು ಸಿಐಡಿಗೆ ಒಪ್ಪಿಸಿದ್ದರು ಎಂದು ಯಡಿಯೂರಪ್ಪ ದೂರಿದ್ದಾರೆ. 
ಬಿಜೆಪಿಯ ಎಲ್ಲಾ ಶಾಸಕರು, ಎಂ ಎಲ್ ಸಿಗಳು ಸಂಸದರು ಹಾಗೂ ಹಿರಿಯ ನಾಯಕರು ಜಾರ್ಜ್ ರಾಜಿನಾಮೆಗೆ ಒತ್ತಾಯಿಸಿ ನಡೆಸುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ,  ರಾಜೀನಾಮೆ ನೀಡುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ. 
ಭಾರೀ ಮಳೆಯಿಂದ ಬೆಂಗಳೂರಿನಲ್ಲಿ ಸಾರ್ವಜನಿಕರಿಗೆ ತೊಂದರೆ ಆಗಿದೆ. ಬದುಕು ಬೀದಿಗೆ ಬಂದಿದೆ. ಆದರೆ, ಇದನ್ನು ನಿಭಾಯಿಸುವಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವ ಜಾರ್ಜ್‌ ವಿಫಲರಾಗಿದ್ದಾರೆ. ಇವರು ಅಸಮರ್ಥ ಸಚಿವ ಎಂದು ಯಡಿಯೂರಪ್ಪ ವಾಗ್ದಾಳಿ ನಡೆಸಿದರು.
ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ನೀಡಿದ ಹೇಳಿಕೆಗೆ ವಿರೋಧ ವ್ಯಕ್ತ ಪಡಿಸಿದ ಅವರು, ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದೆ. ಬೇಗನೆ ಹಂತಕರನ್ನು ಪತ್ತೆ ಮಾಡಲಿ. ಸಂಘಪರಿವಾರದ ಮೇಲೆ ಗೂಬೆ ಕೂರಿಸುವ ಕೆಲಸ ಏಕೆ ಮಾಡಬೇಕು ಎಂದು ತರಾಟೆಗೆ ತೆಗೆದುಕೊಂಡರು. ಈ ಬಗ್ಗೆ ಸಮಗ್ರ ತನಿಖೆ ಆಗಬೇಕು. ಕೊಲೆ ಆದ ದಿನವೇ ರಾಹುಲ್‌ಗಾಂಧಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಸಂಬಂಧ ಕಲ್ಪಿಸುವ ಮೂಲಕ ಹುಡುಗಾಟದ ಹೇಳಿಕೆ ನೀಡಿದ್ದರು. 
SCROLL FOR NEXT